ಕಾರವಾರ: ಕೈಗಾ ರಸ್ತೆಯಲ್ಲಿ ಭಾರಿ ವಾಹನಗಳ ಅತಿವೇಗ ಹಾಗೂ ಅಜಾಗರೂಕ ಚಾಲನೆ ಕುರಿತು ಸಾರ್ವಜನಿಕರ ಆತಂಕದ ನಡುವೆಯೇ, ಡಂಪರ್ವೊಂದು ಎರಡು ದನಗಳಿಗೆ ಡಿಕ್ಕಿ ಹೊಡೆದು ಎರಡು ಜಾನುವಾರುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಖಾರ್ಗಾ ಗ್ರಾಮದ ಬಳಿ ನಡೆದಿದೆ. ಅಪಘಾತದ ಬಳಿಕ ಚಾಲಕ ವಾಹನ ನಿಲ್ಲಿಸದೇ ಪರಾರಿಯಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಡಂಪರ್ಗಳು ಸೇರಿದಂತೆ ಬೃಹತ್ ವಾಹನಗಳ ಸಂಚಾರ ಗಣನೀಯವಾಗಿ ಹೆಚ್ಚಾಗಿದೆ. ಕಾಮಗಾರಿಗೆ ಅಗತ್ಯ ಸಾಮಗ್ರಿಗಳ ಸಾಗಾಟಕ್ಕಾಗಿ ನಿರಂತರವಾಗಿ ಭಾರಿ ವಾಹನಗಳು ಸಂಚರಿಸುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕವೂ ಹೆಚ್ಚಾಗಿದೆ.
ಖಾರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಹುತೇಕ ಕುಟುಂಬಗಳು ಕೃಷಿ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಜಾನುವಾರುಗಳನ್ನು ಮೇಯಲು ಬಿಡುವುದು ಇಲ್ಲಿನ ಸಾಮಾನ್ಯ ಪದ್ಧತಿಯಾಗಿದೆ. ಆದರೆ, ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರ ಹೆಚ್ಚಾದಂತೆ ಜಾನುವಾರುಗಳ ಸುರಕ್ಷತೆ ಪ್ರಶ್ನೆಯಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರಿ ವಾಹನಗಳ ಚಾಲಕರು ವೇಗದ ಮಿತಿಯನ್ನು ಪಾಲಿಸದೆ ಸಂಚರಿಸುತ್ತಿರುವುದೇ ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಎರಡು ದನಗಳನ್ನು ಬಲಿ ಪಡೆದಿರುವ ಅಪಘಾತದಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು, ಅಪಘಾತಕ್ಕೆ ಕಾರಣವಾದ ಡಂಪರ್ನ್ನು ಪತ್ತೆಹಚ್ಚಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಜಾನುವಾರುಗಳ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
