ಕಾರವಾರ: ಪ್ರಸಕ್ತ ಸಾಲಿನ ಮಹಾಲಯ ಅಮಾವಾಸ್ಯೆ ಹಬ್ಬ ಹಾಗೂ ಸತತ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಸಂಸ್ಥೆಯ ವ್ಯಾಪ್ತಿಗೆ ಬರುವ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 50ಕ್ಕೂ ಹೆಚ್ಚು ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಅಕ್ಟೋಬರ್ 9ರ ಶುಕ್ರವಾರ, ಅಕ್ಟೋಬರ್ 10ರ ಎರಡನೇ ಶನಿವಾರ ಹಾಗೂ ಮಹಾಲಯ ಅಮಾವಾಸ್ಯೆ ಜತೆಗೆ ಅಕ್ಟೋಬರ್ 11ರ ರವಿವಾರ ರಜೆಗಳು ಒಟ್ಟಾಗಿ ಬಂದಿರುವುದರಿಂದ ಬೆಂಗಳೂರು ಹಾಗೂ ಇತರೇ ಪ್ರಮುಖ ಸ್ಥಳಗಳಲ್ಲಿ ಪ್ರಯಾಣಿಕರ ಭಾರೀ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ಇದನ್ನು ಮನಗಂಡು, ಬೆಂಗಳೂರಿನಿಂದ ಸಂಸ್ಥೆಯ ವ್ಯಾಪ್ತಿಯ ವಿವಿಧ ಪ್ರಮುಖ ಸ್ಥಳಗಳಿಗೆ ತೆರಳಲು ಅಕ್ಟೋಬರ್ 9ರಂದು ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಸಾರ್ವಜನಿಕರು ಈ ಹೆಚ್ಚುವರಿ ವಿಶೇಷ ಸಾರಿಗೆಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವುದರೊಂದಿಗೆ, ಯಾವುದೇ ತೊಂದರೆಯಿಲ್ಲದೆ ಸುಖಕರ ಹಾಗೂ ಸುರಕ್ಷಿತವಾಗಿ ತಮ್ಮ ಗಮ್ಯಸ್ಥಾನ ತಲುಪಲು ಸಂಸ್ಥೆಯ ಬಸ್ಸುಗಳಲ್ಲಿಯೇ ಪ್ರಯಾಣಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಕಟಣೆಯಲ್ಲಿ ಕೋರಿದೆ.
ಮಹಾಲಯ ಅಮಾವಾಸ್ಯೆ: ವಿಶೇಷ ಬಸ್ಗಳ ಕಾರ್ಯಾಚರಣೆ
