ಅಕ್ಟೋಬರ್ 27, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಉತ್ತರ ಕನ್ನಡದಲ್ಲಿ ಮಹಿಳೆಯರಿಗೆ ಬಂಪರ್ ಮೀಸಲಾತಿ!

Pakka News Web • 7 ಆಕ್ಟೋ 2026,

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ಅಧಿಸೂಚನೆ ಪ್ರಕಟವಾಗಿದ್ದು, ಮಹಿಳಾ ಆಕಾಂಕ್ಷಿಗಳಿಗೆ ದೊಡ್ಡ ಅವಕಾಶ ದೊರೆತಿದೆ. ಜಿಲ್ಲೆಯ 53 ಜಿಲ್ಲಾ ಪಂಚಾಯತ್ ಸ್ಥಾನಗಳ ಪೈಕಿ 27 ಸ್ಥಾನಗಳು ಮಹಿಳೆಯರಿಗೆ, 118 ತಾಲೂಕು ಪಂಚಾಯತ್ ಸ್ಥಾನಗಳ ಪೈಕಿ 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಅನ್ವಯ ಮೀಸಲಾತಿ ನಿಗದಿಪಡಿಸಿದೆ. ಇದರೊಂದಿಗೆ ಈ ಹಿಂದೆ ಪ್ರಕಟಿಸಿದ್ದ ಅಧಿಸೂಚನೆಗಳನ್ನು ರದ್ದುಗೊಳಿಸಲಾಗಿದೆ.

ಜಿಲ್ಲಾ ಪಂಚಾಯತ್ ಯ 53 ಸ್ಥಾನಗಳಲ್ಲಿ ಸಾಮಾನ್ಯ ವರ್ಗಕ್ಕೆ 30, ಹಿಂದುಳಿದ ವರ್ಗ ‘ಅ’ಕ್ಕೆ 14, ಹಿಂದುಳಿದ ವರ್ಗ ‘ಬ’ಕ್ಕೆ 4, ಪರಿಶಿಷ್ಟ ಜಾತಿಗೆ 4 ಹಾಗೂ ಪರಿಶಿಷ್ಟ ಪಂಗಡಕ್ಕೆ ಒಂದು ಸ್ಥಾನ ನಿಗದಿಯಾಗಿದೆ. ಈ ಪೈಕಿ ಸಾಮಾನ್ಯ ವರ್ಗದ 15, ಹಿಂದುಳಿದ ವರ್ಗ ‘ಅ’ದ 7, ಹಿಂದುಳಿದ ವರ್ಗ ‘ಬ’ದ 2, ಪರಿಶಿಷ್ಟ ಜಾತಿಯ 2 ಹಾಗೂ ಪರಿಶಿಷ್ಟ ಪಂಗಡದ ಒಂದು ಸ್ಥಾನ ಸೇರಿದಂತೆ ಒಟ್ಟು 27 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ತಾಲೂಕು ಪಂಚಾಯತ್ ಯ 118 ಸ್ಥಾನಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಪರಿಶಿಷ್ಟ ಜಾತಿಗೆ 13, ಪರಿಶಿಷ್ಟ ಪಂಗಡಕ್ಕೆ 12, ಹಿಂದುಳಿದ ವರ್ಗ ‘ಅ’ಕ್ಕೆ 25, ಹಿಂದುಳಿದ ವರ್ಗ ‘ಬ’ಕ್ಕೆ 3 ಹಾಗೂ ಸಾಮಾನ್ಯ ವರ್ಗಕ್ಕೆ 65 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಯ 12, ಪರಿಶಿಷ್ಟ ಪಂಗಡದ 12, ಹಿಂದುಳಿದ ವರ್ಗ ‘ಅ’ದ 15 ಹಾಗೂ ಸಾಮಾನ್ಯ ವರ್ಗದ 26 ಸ್ಥಾನಗಳು ಸೇರಿದಂತೆ ಒಟ್ಟು 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.

ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳ್ಳುವ ನಿರೀಕ್ಷೆ ಇದೆ. ಮಹಿಳಾ ಆಕಾಂಕ್ಷಿಗಳಲ್ಲೂ ಚುನಾವಣಾ ಸಿದ್ಧತೆ ಆರಂಭವಾಗುವ ಸಾಧ್ಯತೆ ಇದ್ದು, ಯಾವ ಕ್ಷೇತ್ರದಿಂದ ಯಾರು ಸ್ಪರ್ಧಿಸಲಿದ್ದಾರೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಆರಂಭವಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250