ಅಕ್ಟೋಬರ್ 27, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಬಿಜೆಪಿಯಿಂದ ಸೇವಾ ಜ್ಯೋತಿ ಮತ್ತು ಬೃಹತ್ ಪಾದಯಾತ್ರೆ!

Pakka News Web • 7 ಆಕ್ಟೋ 2026,

ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಸಾರ್ಥಕ ಜನಸೇವೆ ಪೂರೈಸಿದ ಹಿನ್ನೆಲೆಯಲ್ಲಿ, ನಗರದ ದೈವಜ್ಞ ಭವನದಲ್ಲಿ ಬಿಜೆಪಿ ವತಿಯಿಂದ ‘ಸೇವಾ ಪಾಕ್ಷಿಕ’ ಅಭಿಯಾನದಡಿ ‘ಸೇವಾ ಜ್ಯೋತಿ’ ಕಾರ್ಯಕ್ರಮ ಹಾಗೂ ಬೃಹತ್ ಪಾದಯಾತ್ರೆಯನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು, ಮೋದಿಯವರ ಅಭಿವೃದ್ಧಿ ಪರ ಆಡಳಿತ ಹಾಗೂ ದೇಶಪ್ರೇಮವನ್ನು ಕೊಂಡಾಡಿದರು.

ದೇಶದ ಅಭಿವೃದ್ಧಿಗೆ ಕೈಜೋಡಿಸಿ – ಕ್ಯಾ. ಗಣೇಶ್ ಕಾರ್ಣಿಕ್: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, “ನರೇಂದ್ರ ಮೋದಿ ಅವರು ಕೇವಲ ಪ್ರಧಾನಿಯಲ್ಲ, ವೈಯಕ್ತಿಕ ಸ್ವಾರ್ಥವಿಲ್ಲದೆ ದೇಶಕ್ಕಾಗಿ ದುಡಿಯುತ್ತಿರುವ ಶ್ರೇಷ್ಠ ರಾಜನೀತಿಜ್ಞ ಹಾಗೂ ರಾಜಕೀಯ ಸಂತ. ಇಂತಹ ನಾಯಕನೊಂದಿಗೆ ನಾವೂ ಕೈಜೋಡಿಸಿ ದೇಶದ ಹಿತರಕ್ಷಣೆಗೆ ಮುಂದಾಗಬೇಕು. ರಾಷ್ಟ್ರ ವಿರೋಧಿ ಚಿಂತನೆಗಳನ್ನು ಮಟ್ಟಹಾಕಿ ದೇಶದ ಅಭಿವೃದ್ಧಿಗೆ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು” ಎಂದು ಕರೆ ನೀಡಿದರು.

“ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮಾಧ್ಯಮಗಳಲ್ಲಿ ಕೇವಲ ಹಗರಣಗಳದ್ದೇ ಸುದ್ದಿಯಾಗಿರುತ್ತಿತ್ತು. ಆದರೆ ಮೋದಿ ಪ್ರಧಾನಿಯಾದ ಬಳಿಕ ಅಭಿವೃದ್ಧಿ ಮತ್ತು ಜನಪರ ಯೋಜನೆಗಳು ಮುನ್ನೆಲೆಗೆ ಬಂದಿವೆ. ಆಯುಷ್ಮಾನ್ ಭಾರತದಂತಹ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದ್ದು, ‘ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್’ ಎಂಬ ಆಶಯದಡಿ ದೇಶ ಪ್ರಗತಿಯತ್ತ ಮುನ್ನಡೆಯುತ್ತಿದೆ” ಎಂದು ಅವರು ಬಣ್ಣಿಸಿದರು.

ವಿಕಸಿತ ಭಾರತದ ಸಂಕಲ್ಪ ಸಾಕಾರಗೊಳ್ಳಲಿ – ರೂಪಾಲಿ ನಾಯ್ಕ: ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಮಾತನಾಡಿ, “ಪ್ರಧಾನಿ ಮೋದಿಯವರು 2047ರ ‘ವಿಕಸಿತ ಭಾರತ’ದ ಕನಸು ಹೊತ್ತು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಅವರ ಅಭಿವೃದ್ಧಿ ಚಿಂತನೆಗಳು ಹಾಗೂ ಜನಪರ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಮೂಲಕ ದೇಶದ ಪ್ರಗತಿಯಲ್ಲಿ ನಾವೂ ಪಾಲುದಾರರಾಗಬೇಕು” ಎಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಜಾನನ ಗುನಗಾ ಅವರು, “ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದ ಜನತೆಗೆ ಸ್ಫೂರ್ತಿಯಾಗಿದ್ದಾರೆ” ಎಂದರು.

ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮುಖಂಡರಾದ ಕೆ.ಜಿ. ನಾಯ್ಕ, ಗೋವಿಂದ ನಾಯ್ಕ, ಈಶ್ವರ ನಾಯ್ಕ, ಸೇವಾ ಪಾಕ್ಷಿಕ ಸಂಯೋಜಕ ಎಂ.ಜಿ. ಭಟ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಜಿಲ್ಲಾ ಮಾಧ್ಯಮ ಸಂಚಾಲಕ ಕಿಶನ್ ಕಾಂಬಳೆ, ನಗರ ಮಂಡಲ ಅಧ್ಯಕ್ಷ ನಾಗೇಶ ಕುರ್ಡೆಕರ, ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ್ ಗುನಗಿ, ಶುಭಂ ಕಳಸ, ರಾಜು ಭಂಡಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿವಾಜಿ ನರಸಾನಿ ಸ್ವಾಗತಿಸಿದರೆ, ಪ್ರಶಾಂತ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಮೆರವಣಿಗೆ ಹಾಗೂ ಭಾಷಣ ವೀಕ್ಷಣೆ: ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರಪ್ರಸಾರವನ್ನು ಏರ್ಪಡಿಸಲಾಗಿತ್ತು. ನೆರೆದಿದ್ದ ಕಾರ್ಯಕರ್ತರು ಮತ್ತು ನಾಯಕರು ಅತ್ಯುತ್ಸಾಹದಿಂದ ಭಾಷಣ ವೀಕ್ಷಿಸಿದರು. ಬಳಿಕ ಸುಭಾಷ್ ವೃತ್ತದ ಮೂಲಕ ನಗರದಾದ್ಯಂತ ಬೃಹತ್ ಪಾದಯಾತ್ರೆ (ಮೆರವಣಿಗೆ) ನಡೆಸಲಾಯಿತು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250