ಶಿರಸಿ: ಗುತ್ತಿಗೆದಾರನಿಗೆ ಪಾವತಿಸಬೇಕಿದ್ದ ಕಾಮಗಾರಿಯ ಬಿಲ್ ವರ್ಷಗಳ ಕಾಲ ಬಾಕಿ ಉಳಿದ ಪರಿಣಾಮ, ನ್ಯಾಯಾಲಯದ ಆದೇಶದ ಮೇರೆಗೆ ಶಿರಸಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡುವ ಪ್ರಕ್ರಿಯೆ ಗುರುವಾರ ನಡೆದಿದೆ.

ಶಿರಸಿ ತಾಲೂಕು ಬನವಾಸಿಯ ಹರ್ಡಿಕರ್ ಮಂಜಪ್ಪ ಸಭಾಭವನದ ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಬಿಲ್ ಪಾವತಿಯಾಗಿಲ್ಲ ಎಂದು ಆರೋಪಿಸಿ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು ಎನ್ನಲಾಗಿದೆ. ಸುಮಾರು 22 ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ಬಾಕಿ ಪಾವತಿ ಕುರಿತಂತೆ ನ್ಯಾಯಾಲಯದ ಆದೇಶ ಬಂದಿದ್ದರೂ, ಇಲಾಖೆ ಅದನ್ನು ಸಮರ್ಪಕವಾಗಿ ಪಾಲಿಸದ ಹಿನ್ನೆಲೆಯಲ್ಲಿ ಜಪ್ತಿ ಕ್ರಮಕ್ಕೆ ಮುಂದಾಗಲಾಗಿದೆ ಎಂದು ತಿಳಿದುಬಂದಿದೆ.
ಇದರಂತೆ ನ್ಯಾಯಾಲಯದ ಆದೇಶದ ಅನುಷ್ಠಾನಕ್ಕಾಗಿ ಅಧಿಕಾರಿಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಚೇರಿಗೆ ಆಗಮಿಸಿ ಪೀಠೋಪಕರಣಗಳ ಜಪ್ತಿ ಪ್ರಕ್ರಿಯೆ ಆರಂಭಿಸಿದ್ದಾರೆ. ಹಲವು ವರ್ಷಗಳ ಹಿಂದಿನ ಬಿಲ್ ಪ್ರಕರಣವೊಂದು ಇದೀಗ ಇಲಾಖೆಯ ಕಚೇರಿ ಪೀಠೋಪಕರಣ ಜಪ್ತಿಯ ಹಂತಕ್ಕೆ ತಲುಪಿರುವುದು ಗಮನ ಸೆಳೆದಿದೆ.
