ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಶುದ್ಧ ಮತದಾರರ ಪಟ್ಟಿ ತಯಾರಿಕೆಗೆ ಪಣ: ರಾಜಕೀಯ ಪಕ್ಷಗಳ ಸಹಕಾರಕ್ಕೆ ಜಿಲ್ಲಾಧಿಕಾರಿ ಕರೆ

Pakka News Web • 18 ಜೂನ್ 2026,

ಕಾರವಾರ: ಜಿಲ್ಲೆಯಲ್ಲಿ ಜೂನ್ 30 ರಿಂದ ಜುಲೈ 29 ರವರೆಗೆ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯವನ್ನು ಯಶಸ್ವಿಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಆಡಳಿತದೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಕರೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜಕೀಯ ಪಕ್ಷಗಳ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಈ ಅವಧಿಯಲ್ಲಿ ಮತಗಟ್ಟೆ ಅಧಿಕಾರಿಗಳು (ಬಿಎಲ್‌ಓ) ಮನೆ ಮನೆಗೆ ಭೇಟಿ ನೀಡಿ ‘ಎನ್ಯೂಮರೇಷನ್ ಫಾರ್ಮ್’ಗಳನ್ನು ವಿತರಿಸಿ, ಮರಳಿ ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.

ಸಾರ್ವಜನಿಕರು ಈ ಫಾರ್ಮ್‌ಗಳನ್ನು ಭರ್ತಿ ಮಾಡಿ, ತಮ್ಮ ಇತ್ತೀಚಿನ ಕಲರ್ ಭಾವಚಿತ್ರದೊಂದಿಗೆ ಬಿಎಲ್‌ಓಗಳಿಗೆ ಮರಳಿ ನೀಡುವುದು ಕಡ್ಡಾಯವಾಗಿದ್ದು, ತಪ್ಪಿದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದಿಲ್ಲ. ಈ ಫಾರ್ಮ್ ಜೊತೆಗೆ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿರುವುದಿಲ್ಲ. ಪ್ರಸ್ತುತ ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು, ಈ ಪ್ರಕ್ರಿಯೆಗಾಗಿ 1,445 ಬಿಎಲ್‌ಓ ಹಾಗೂ 144 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ಜಿಲ್ಲಾಡಳಿತ ಜಾಗೃತಿ ವಹಿಸಲಿದ್ದು, ಸಾರ್ವಜನಿಕರು ಗೊಂದಲಗಳಿದ್ದಲ್ಲಿ ಬಿಎಲ್‌ಓಗಳನ್ನು ಸಂಪರ್ಕಿಸಬಹುದು ಎಂದರು.

ಸಭೆಯಲ್ಲಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಾತನಾಡಿ, ಬಿಎಲ್‌ಓಗಳಿಗೆ ಸೂಕ್ತ ತರಬೇತಿ ನೀಡಬೇಕು ಹಾಗೂ ಅನಕ್ಷರಸ್ಥರು, ಕಾರ್ಮಿಕರು ಮತ್ತು ಶೋಷಿತ ವರ್ಗದ ಜನರಲ್ಲಿ ಸ್ವಚ್ಛತಾ ವಾಹನಗಳ ಮೂಲಕ ವ್ಯಾಪಕ ಅರಿವು ಮೂಡಿಸಬೇಕು ಎಂದು ವಿನಂತಿಸಿದರು. ಕರಡು ಪಟ್ಟಿ ಪ್ರಕಟಿಸುವಾಗ ಒಂದೇ ಕುಟುಂಬದ ಸದಸ್ಯರಿಗೆ ಒಂದೇ ಮತಗಟ್ಟೆಯಲ್ಲಿ ಮತದಾನ ಮಾಡಲು ಅನುಕೂಲ ಕಲ್ಪಿಸುವಂತೆ ಕೋರಿದ ನಾಯಕರು, ಶುದ್ಧ ಮತದಾರರ ಪಟ್ಟಿ ತಯಾರಿಕೆಯ ಈ ಕಾರ್ಯಕ್ಕೆ ಎಲ್ಲಾ ಪಕ್ಷಗಳಿಂದ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250