ಅಕ್ಟೋಬರ್ 21, 2026
ಬುಧವಾರ

ನಮ್ಮನ್ನು ಅನುಸರಿಸಿ

Uttara-Kannada

ಕೈಗಾಗೆ ಮತ್ತೊಂದು ಬೃಹತ್ ವಿಕಿರಣ ರಕ್ಷಾ ಕವಚ!

Pakka News Web • 20 ಆಕ್ಟೋ 2026,

ಕಾರವಾರ: ಕೈಗಾದಲ್ಲಿ ನಿರ್ಮಾಣವಾಗುತ್ತಿರುವ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳಿಗೆ ಅಗತ್ಯವಿರುವ ಎರಡನೇ ಬೃಹತ್ ವಿಕಿರಣ ರಕ್ಷಾ ಕವಚವನ್ನು ಹೊತ್ತ ವಾಹನ ಅಂಕೋಲಾ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ್ದು, ಕೆಲವೇ ದಿನಗಳಲ್ಲಿ ಕಾರವಾರ ತಲುಪುವ ನಿರೀಕ್ಷೆಯಿದೆ. ಈ ಬೃಹತ್ ವಾಹನ ಕಾರವಾರದಿಂದ ಇಳಕಲ್ ಕಡೆಗೆ ಸಾಗುವ ರಾಜ್ಯ ಹೆದ್ದಾರಿಯ ಮೂಲಕ ಕೈಗಾ ತಲುಪಬೇಕಿರುವುದರಿಂದ, ಮಾರ್ಗಮಧ್ಯದ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಹಾಗೂ ವಾಹನ ಸಂಚಾರಕ್ಕೆ ಮತ್ತೆ ಅಡಚಣೆಯಾಗುವ ಆತಂಕ ಎದುರಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಇದೇ ರೀತಿಯ ಮೊದಲ ಬೃಹತ್ ವಾಹನ ಕೈಗಾ ಸಮೀಪ ಪಲ್ಟಿಯಾಗಿದ್ದ ಘಟನೆ ಸ್ಥಳೀಯರ ನೆನಪಿನಿಂದ ಇನ್ನೂ ಮಾಸಿಲ್ಲ. ಇದೀಗ ಮತ್ತೊಂದು ವಾಹನ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಕಿರಿದಾದ ರಸ್ತೆಗಳು, ಅಪಾಯಕಾರಿ ತಿರುವುಗಳು ಮತ್ತು ವಿದ್ಯುತ್ ತಂತಿಗಳ ಅಡಚಣೆಯ ನಡುವೆ ಬೃಹತ್ ಸಾಮಗ್ರಿಯನ್ನು ಸಾಗಿಸುವ ಸವಾಲು ಮತ್ತೆ ಎದುರಾಗಿದೆ. ವಾಹನ ಸಂಚಾರ ಸುಗಮಗೊಳಿಸಲು ಹಾಗೂ ಸಾರ್ವಜನಿಕರಿಗೆ ಆಗುವ ಅನಾನುಕೂಲ ತಪ್ಪಿಸಲು ರಸ್ತೆ ಅಗಲೀಕರಣ ಮಾಡಬೇಕು ಎಂಬುದು ಸ್ಥಳೀಯ ಗ್ರಾಮಸ್ಥರ ಒತ್ತಾಯವಾಗಿದೆ.

ಕೈಗಾದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಅಣು ವಿದ್ಯುತ್ ಘಟಕಗಳಿಗೆ ಇಂತಹ ಬೃಹತ್ ಉಪಕರಣಗಳ ಅಗತ್ಯವಿದ್ದು, ಅವುಗಳನ್ನು ಸಾಗಿಸುವ ಸಂದರ್ಭದಲ್ಲಿ ಮಾರ್ಗದಲ್ಲಿನ ವಿದ್ಯುತ್ ತಂತಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಬೇಕಾಗುತ್ತದೆ. ಈ ಕಾರ್ಯಕ್ಕಾಗಿ ಹೆಸ್ಕಾಂ ಸಿಬ್ಬಂದಿಯ ತಂಡವೂ ವಾಹನದೊಂದಿಗೆ ಸಾಗಬೇಕಿದೆ. ಇದರಿಂದ ಮಾರ್ಗದ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ಬೃಹತ್ ವಾಹನ ಸಂಚರಿಸುವ ರಸ್ತೆಗಳಲ್ಲಿ ಸಾಮಾನ್ಯ ವಾಹನಗಳ ಓಡಾಟಕ್ಕೂ ತೊಂದರೆಯಾಗಬಹುದು.

ಏನಿದು ವಿಕಿರಣ ರಕ್ಷಾ ಕವಚ?

ಕೈಗಾದ 5 ಮತ್ತು 6ನೇ ಅಣು ವಿದ್ಯುತ್ ಘಟಕಗಳ ರಿಯಾಕ್ಟರ್‌ಗೆ ಸಂಬಂಧಿಸಿದಂತೆ ಅಳವಡಿಸಲಾಗುವ ‘ಎಂಡ್ ಕ್ಯಾಪ್’ ಎಂಬ ಬೃಹತ್ ಲೋಹದ ಉಪಕರಣ ಇದಾಗಿದೆ. ರಿಯಾಕ್ಟರ್‌ನ ಸುರಕ್ಷತಾ ವ್ಯವಸ್ಥೆಯ ಭಾಗವಾಗಿರುವ ಈ ಉಪಕರಣವನ್ನು ಎಲ್‌ ಆ್ಯಂಡ್‌ ಟಿ ಕಂಪನಿ ತಯಾರಿಸಿದ್ದು, ಗುಜರಾತ್‌ನ ಸೂರತ್‌ನಿಂದ ಸಾಗಿಸಲಾಗುತ್ತಿದೆ. ಸುಮಾರು 140 ಮೆಟ್ರಿಕ್ ಟನ್ ತೂಕ ಹಾಗೂ 9 ಮೀಟರ್ ವ್ಯಾಸ ಹೊಂದಿರುವ ಈ ಬೃಹತ್ ಸಾಮಗ್ರಿಯನ್ನು ಸಾಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಲವು ಚಕ್ರಗಳು ಮತ್ತು ಹೈಡ್ರಾಲಿಕ್ ವ್ಯವಸ್ಥೆಯುಳ್ಳ ವಾಹನ ಬಳಸಲಾಗುತ್ತಿದೆ.

ಮೊದಲ ವಾಹನ ಪಲ್ಟಿಯಾಗಿದ್ದ ಕಹಿ ನೆನಪು

ಕಳೆದ ಏಪ್ರಿಲ್‌ನಲ್ಲಿ ಮೊದಲ ವಿಕಿರಣ ರಕ್ಷಾ ಕವಚವನ್ನು ಹೊತ್ತ ವಾಹನ ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಹರ್ಟೂಗಾ ಸಮೀಪ ಪಲ್ಟಿಯಾಗಿತ್ತು. ಇದರಿಂದ ಕೈಗಾ–ಮಲ್ಲಾಪುರ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದ್ದರು. ಅದೃಷ್ಟವಶಾತ್, ಸಾಗಿಸಲಾಗುತ್ತಿದ್ದ ಉಪಕರಣಕ್ಕೆ ಹಾನಿಯಾಗಿರಲಿಲ್ಲ. ಬಳಿಕ ಬೃಹತ್ ಕ್ರೇನ್‌ಗಳ ನೆರವಿನಿಂದ ವಾಹನವನ್ನು ತೆರವುಗೊಳಿಸಿ, ಉಪಕರಣವನ್ನು ಕೈಗಾಗೆ ಸಾಗಿಸಿ ಅಳವಡಿಸಲಾಗಿತ್ತು.

ಈಗ ಎರಡನೇ ಉಪಕರಣದ ಆಗಮನದೊಂದಿಗೆ ಮತ್ತೊಮ್ಮೆ ಸಂಚಾರ ಮತ್ತು ವಿದ್ಯುತ್ ವ್ಯತ್ಯಯದ ಸಾಧ್ಯತೆ ಎದುರಾಗಿದೆ. ಕೈಗಾ ಯೋಜನೆಯ ಕಾಮಗಾರಿಗಳಿಗೆ ಇಂತಹ ಬೃಹತ್ ಉಪಕರಣಗಳ ಸಾಗಣೆ ಅನಿವಾರ್ಯವಾದರೂ, ಕಿರಿದಾದ ರಸ್ತೆಗಳು ಮತ್ತು ತಿರುವುಗಳಿಂದ ಕೂಡಿದ ಮಾರ್ಗದಲ್ಲಿ ಸಾರ್ವಜನಿಕರು ಪದೇಪದೇ ತೊಂದರೆ ಅನುಭವಿಸುವಂತಾಗಬಾರದು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಭವಿಷ್ಯದಲ್ಲಿಯೂ ಇಂತಹ ಬೃಹತ್ ವಾಹನಗಳ ಸಂಚಾರ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಸಂಬಂಧಪಟ್ಟ ಇಲಾಖೆಗಳು ರಸ್ತೆ ಅಗಲೀಕರಣ ಹಾಗೂ ಸುಗಮ ಸಂಚಾರಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250