ಅಗತ್ಯ ದಾಖಲೆ ಸಿದ್ಧವಿಟ್ಟುಕೊಳ್ಳಲು ಮನವಿ
ಮನೆ ಬಾಗಿಲಿಗೆ ಬರಲಿದ್ದಾರೆ ಹೆಸ್ಕಾಂ ಮೀಟರ್ ರೀಡರ್
ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹ ಜ್ಯೋತಿ (GJY) ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯ ಬುಧವಾರದಿಂದ (ಜುಲೈ 01) ಆರಂಭಗೊಂಡಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಕೋರಿದೆ.
ಈ ಕುರಿತು ಪ್ರಕಟಣೆಯ ಹೊರಡಿಸಿರುವ ಹೆಸ್ಕಾಂ, 2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಪರಿಶೀಲನಾ ಕಾರ್ಯ ನಡೆದಿದ್ದು,ಹೆಸ್ಕಾಂನ ಮೀಟರ್ ರೀಡರ್‌ಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆ ಪರಿಶೀಲನೆ ನಡೆಸಿ ಅವರ ಮಾಹಿತಿ ಸಂಗ್ರಹಿಸಿ, ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರ ಮೂಲಕ ಗೃಹ ಜ್ಯೋತಿ ಫಲಾನುಭವಿಗಳ ಪರಿಶೀಲನಾ ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ.

ಹೆಸ್ಕಾಂ ಸಿಬ್ಬಂದಿ ಮನೆ-ಮನೆ ಭೇಟಿ ಸಂದರ್ಭದಲ್ಲಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ಪ್ಯಾನ್ ಕಾರ್ಡ್, ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ) , ರೇಷನ್ ಕಾರ್ಡ್ ( ಪಡಿತರ ಚೀಟಿ) ಹಾಗೂ ಜಾತಿ ಪ್ರಮಾಣ ಪತ್ರ ವನ್ನು ತೋರಿಸಬೇಕು. ಹೆಸ್ಕಾಂ ಸಿಬ್ಬಂದಿಯು ಮನೆ ಮಾಲೀಕರು ಅಥವಾ ಬಾಡಿಗೆದಾರರಿಂದ ಮಾಹಿತಿ ಪಡೆದು ಸೇವಾ ಸಿಂಧು ತಂತ್ರಾಂಶದಲ್ಲಿ ದಾಖಲಿಸಲಿದ್ದಾರೆ. ಪಡಿತರ ಚೀಟಿ ಇದ್ದರೆ ಇದೆ ಎಂಬ ಮಾಹಿತಿ ನೀಡಬೇಕು. ಎಪಿಎಲ್ ಇದ್ದರೆ ಎಪಿಎಲ್ ಕಾರ್ಡ್ ನಂಬರ್ ಅಥವಾ ಬಿಪಿಎಲ್ ಇದ್ದರೆ ಬಿಪಿಎಲ್ ಕಾರ್ಡ್ ನಂಬರ್‌ನ್ನು ಕೊಡಬೇಕಾಗುತ್ತದೆ. ಯಾವುದೇ ಕಾರ್ಡ್ ಇಲ್ಲದಿದ್ದರೆ, ಅದನ್ನೂ ತಿಳಿಸಬೇಕು ಎಂದು ಮನವಿ ಮಾಡಿದೆ.
ಈ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದ್ದು, ಫಲಾನುಭವಿ ಗ್ರಾಹಕರು ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೆಸ್ಕಾಂ ಮನವಿ ಮಾಡಿದೆ.
ಅವಶ್ಯವಿರುವ ದಾಖಲೆಗಳು
• ಆಧಾರ್ ಕಾರ್ಡ್
• ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
• ಮತದಾರರ ಗುರುತಿನ ಚೀಟಿ (ವೋಟರ್ ಐಡಿ)
• ಪ್ಯಾನ್ ಕಾರ್ಡ್
• ಬಾಡಿಗೆ ಒಪ್ಪಂದದ ಪತ್ರಗಳು (ಅನ್ವಯಿಸುವಲ್ಲಿ ಮಾತ್ರ)
• ರೇಷನ್ ಕಾರ್ಡ್ ( ಪಡಿತರ ಚೀಟಿ)
• ಜಾತಿ ಪ್ರಮಾಣ ಪತ್ರ
