ನೌಕಾನೆಲೆ ಅಧಿಕಾರಿಯ ಕಟು ವರ್ತನೆಗೆ ಶಾಸಕ ಸತೀಶ್ ಸೈಲ್ ಆಕ್ರೋಶ
ಕಾರವಾರ: ಸೀಬರ್ಡ್ ನೌಕಾನೆಲೆಯ ಅಧಿಕಾರಿಗಳು ಸಾರ್ವಜನಿಕ ಕುಂದುಕೊರತೆಗಳ ಕುರಿತು ಜನಪ್ರತಿನಿಧಿಗಳೊಂದಿಗೆ ಸಂವಹನ ನಡೆಸುವಾಗ ಸೌಜನ್ಯ ಹಾಗೂ ಗೌರವದಿಂದ ವರ್ತಿಸುವ ಅಗತ್ಯವಿದೆ ಎಂದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ನೌಕಾನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಜನಾ ನಿರಾಶ್ರಿತ ಗುತ್ತಿಗೆ ಕಾರ್ಮಿಕನೊಬ್ಬನ ಗೇಟ್ ಪಾಸ್ಗೆ ಸಂಬಂಧಿಸಿದ ಪೊಲೀಸ್ ಪರಿಶೀಲನೆ (ವೆರಿಫಿಕೇಶನ್) ಕುರಿತು ಚರ್ಚಿಸಲು ನೌಕಾನೆಲೆಯ ಸಂಬಂಧಪಟ್ಟ ಅಧಿಕಾರಿಯೊಬ್ಬರಿಗೆ ಮೊಬೈಲ್ ಮೂಲಕ ಕರೆ ಮಾಡಿದಾಗ ಕಟು ಅನುಭವ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಶಾಸಕರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಕ್ಷಣವೇ ಈ ಘಟನೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಜಿಲ್ಲಾಧಿಕಾರಿಗಳು ನೌಕಾನೆಲೆಯ ಉನ್ನತಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ನೌಕಾನೆಲೆಯ ಕಮೋಡೋರ್ ವಿಕ್ರಾಂತ್ ಅವರು ಶಾಸಕರಿಗೆ ದೂರವಾಣಿ ಕರೆ ಮಾಡಿ, ಕೆಳಹಂತದ ಅಧಿಕಾರಿಯ ಅಸಭ್ಯ ವರ್ತನೆಗೆ ವಿಷಾದ ವ್ಯಕ್ತಪಡಿಸುವ ಮೂಲಕ ಘಟನೆಗೆ ತೆರೆ ಎಳೆದಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಸೀಬರ್ಡ್ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ (ಎನ್ಪಿಸಿಐಎಲ್) ಸ್ಥಳೀಯ ಯುವಕರು ಹಾಗೂ ಉತ್ತರ ಭಾರತದ ಗುತ್ತಿಗೆ ಕಾರ್ಮಿಕರ ನಡುವೆ ತಾರತಮ್ಯದ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಶಾಸಕರು ಕಳವಳ ವ್ಯಕ್ತಪಡಿಸಿದ್ದಾರೆ.
ಉತ್ತರ ಭಾರತದಿಂದ ಬರುವ ಕಾರ್ಮಿಕರಿಗೆ ಪೊಲೀಸ್ ಪರಿಶೀಲನಾ ಪತ್ರ ಸಲ್ಲಿಕೆಗೆ ವಿನಾಯಿತಿ ಅಥವಾ ಹೆಚ್ಚುವರಿ ಕಾಲಾವಕಾಶ (ಗ್ರೇಸ್ ಪಿರಿಯಡ್) ನೀಡಲಾಗುತ್ತಿದೆ; ಆದರೆ ಅದೇ ನಿಯಮವನ್ನು ಸ್ಥಳೀಯ ಯುವಕರಿಗೆ ಅತ್ಯಂತ ಕಟ್ಟುನಿಟ್ಟಾಗಿ ಅನ್ವಯಿಸಲಾಗುತ್ತಿದೆ ಎಂಬ ದೂರುಗಳಿವೆ. ಈ ಆರೋಪಗಳಲ್ಲಿ ಹುರುಳಿದ್ದರೆ ಇದು ನೇರವಾಗಿ ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಸ್ಥಳೀಯ ಪೊಲೀಸ್ ಇಲಾಖೆಯೂ ಕೂಡ ಕಾರ್ಮಿಕರಿಗೆ ಪರಿಶೀಲನಾ ಪತ್ರ ನೀಡುವಾಗ ಅವರ ಮೇಲಿರುವ ಪ್ರಕರಣಗಳ ನೈಜ ಸ್ವರೂಪ ಮತ್ತು ಗಂಭೀರತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ನ್ಯಾಯಾಲಯದಲ್ಲಿ ಸಣ್ಣಪುಟ್ಟ ಕೇಸುಗಳಿದ್ದ ಮಾತ್ರಕ್ಕೆ ಅಥವಾ ದ್ವೇಷಪೂರಿತವಾಗಿ ದಾಖಲಾದ ಎಫ್ಐಆರ್ಗಳ ಕಾರಣಕ್ಕೆ ವ್ಯಕ್ತಿಯೊಬ್ಬ ಅಪರಾಧಿಯಾಗುವುದಿಲ್ಲ.
ಅಂತಹ ಸಣ್ಣ ಕಾರಣಗಳಿಗಾಗಿ ಗೇಟ್ ಪಾಸ್ ಅಥವಾ ವೆರಿಫಿಕೇಶನ್ ನಿರಾಕರಿಸಿದರೆ ಸ್ಥಳೀಯ ಬಡ ಯುವಕರ ಉದ್ಯೋಗ ಮತ್ತು ಭವಿಷ್ಯಕ್ಕೆ ತೀವ್ರ ಧಕ್ಕೆಯಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಈ ಕುರಿತು ಮರುಚಿಂತನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಶಾಸಕ ಸತೀಶ್ ಸೈಲ್ ಆಗ್ರಹಿಸಿದ್ದಾರೆ.
