ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಬೊಳ್ವೆ-ಮಲ್ಲಾಪುರ ಮಧ್ಯದ ರಸ್ತೆ ಸಂಪೂರ್ಣ ಹಾನಿ; ಸಾರ್ವಜನಿಕರ ಆಕ್ರೋಶ

Pakka News Web • 4 ಜುಲೈ 2026,

ಕಾರವಾರ: ತಾಲೂಕಿನ ಬೊಳ್ವೆ ಮತ್ತು ಮಲ್ಲಾಪುರ ಮಧ್ಯದ ಮುಖ್ಯ ರಸ್ತೆಯು ಸಂಪೂರ್ಣವಾಗಿ ಹಾಳಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ದಿನದಿಂದ ದಿನಕ್ಕೆ ಈ ರಸ್ತೆಯ ಸ್ಥಿತಿ ಗಂಭೀರವಾಗುತ್ತಿದ್ದು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾಮಾನ್ಯ ದಿನಗಳಲ್ಲೇ ಸಂಚಾರ ದುಸ್ತರವಾಗಿರುವ ಈ ಮಾರ್ಗದಲ್ಲಿ, ಮಳೆಗಾಲದ ಅವಧಿಯಲ್ಲಂತೂ ಪರಿಸ್ಥಿತಿ ಸಂಪೂರ್ಣ ಹದಗೆಡುತ್ತದೆ. ಮಳೆ ಬಂದರೆ ಸಾಕು ಇಡೀ ರಸ್ತೆ ಕೆಸರು ಗದ್ದೆಯಂತಾಗುತ್ತಿದ್ದು, ಬಿದ್ದಿರುವ ಬೃಹತ್ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆ ರಸ್ತೆ ಎಲ್ಲಿದೆ ಎಂದು ಹುಡುಕುವುದೇ ಸಾಹಸದ ಕೆಲಸವಾಗಿದೆ. ಕೆರವಡಿ ಗ್ರಾಮದ ಬೋಳ್ವೆ ಸಮೀಪ ಕೈಗಾ ಯೋಜನೆಗೆ ಜೆಲ್ಲಿ ಕಲ್ಲು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಹೊತ್ತೊಯ್ಯುವ ಭಾರಿ ಸರಕು ವಾಹನಗಳು ನಿರಂತರವಾಗಿ ಸಂಚರಿಸುವುದರಿಂದ ರಸ್ತೆ ಮತ್ತಷ್ಟು ಅಧೋಗತಿಗೆ ತಲುಪಿದೆ. ಇತ್ತೀಚೆಗಷ್ಟೇ ಭಾರಿ ವಾಹನವೊಂದು ರಸ್ತೆ ಮಧ್ಯೆ ಸಿಲುಕಿ ಇಡೀ ರಸ್ತೆ ಸಂಪರ್ಕ ಕಡಿತಗೊಂಡು, ಶಾಲಾ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಕಾರ್ಮಿಕರು ಗಂಟೆಗಟ್ಟಲೆ ಪರದಾಡುವಂತಾಗಿತ್ತು.

ಇಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆಗೆ ಕೇವಲ ತೇಪೆ ಹಚ್ಚುವ ಕೆಲಸ ಮಾಡದೇ, ರಸ್ತೆ ಅಗಲೀಕರಣದೊಂದಿಗೆ ಶಾಶ್ವತವಾದ ಕಾಂಕ್ರೀಟ್ ಅಥವಾ ಡಾಂಬರು ರಸ್ತೆ ನಿರ್ಮಿಸಬೇಕು. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಭಾಗದ ಜನರ ಸಂಕಷ್ಟಕ್ಕೆ ಮುಕ್ತಿ ನೀಡಬೇಕೆಂದು ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250