ಶಿರಸಿ: ರಾಜ್ಯದ ಲೋಕೋಪಯೋಗಿ ಸಚಿವರು ಹಾಗೂ ಹಿಂದುಳಿದ, ಶೋಷಿತ ಸಮುದಾಯಗಳ ಪ್ರಬಲ ಧ್ವನಿಯಾಗಿರುವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಸಂಬಂಧಿತ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸಿರುವ ಕಾರ್ಯಾಚರಣೆಯು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಪವನ್ ನಾಯ್ಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಸ್ತೃತ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ಸಾಂವಿಧಾನಿಕವಾಗಿ ಸ್ವಾಯತ್ತವಾಗಿ ಕಾರ್ಯನಿರ್ವಹಿಸಬೇಕಾದ ತನಿಖಾ ಸಂಸ್ಥೆಗಳು ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿವೆ ಎಂಬುದು ಸಾರ್ವಜನಿಕರಲ್ಲಿ ಬಲವಾದ ಅನುಮಾನ ಮೂಡಿಸಿದೆ.
ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಸಮಾನ ಬಲ ಹೊಂದಿರಬೇಕು. ಆದರೆ, ಕಳೆದ ಕೆಲವು ವರ್ಷಗಳಿಂದ ಕೇಂದ್ರದ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕೇವಲ ವಿಪಕ್ಷಗಳ ನಾಯಕರನ್ನು ಮಾತ್ರ ಗುರಿಯಾಗಿಸಿಕೊಂಡು ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ನ್ಯಾಯ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರಾಗಿರಬೇಕು; ಆದರೆ ಇಲ್ಲಿ ರಾಜಕೀಯ ಹಿತಾಸಕ್ತಿಯೇ ಮುಂಚೂಣಿಯಲ್ಲಿದೆ ಎಂಬ ಭಾವನೆ ಮೂಡುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀ ಸತೀಶ್ ಜಾರಕಿಹೊಳಿ ಅವರು ಕೇವಲ ಒಬ್ಬ ಸಚಿವರಾಗಿರದೆ, ಸದಾ ಸಮಾಜದ ಕಟ್ಟಕಡೆಯ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ನಾಯಕ. ಅವರು ತಮ್ಮ ಸ್ಪಷ್ಟ ವೈಚಾರಿಕತೆ, ದೀನ-ದಲಿತರ ಪರವಾದ ನಿಲುವು ಹಾಗೂ ಪಾರದರ್ಶಕ ರಾಜಕಾರಣಕ್ಕೆ ಹೆಸರುವಾಸಿಯಾದವರು. ಇಂತಹ ಜನಪ್ರಿಯ ನಾಯಕರ ವರ್ಚಸ್ಸಿಗೆ ಧಕ್ಕೆ ತರಲು ಇಂತಹ ತನಿಖಾ ಕ್ರಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಚುನಾವಣಾ ರಾಜಕೀಯದಲ್ಲಿ ಜನಾದೇಶವನ್ನು ಮುಖಾಮುಖಿ ಎದುರಿಸಲಾಗದವರು, ಇಂತಹ ಪರೋಕ್ಷ ಮಾರ್ಗಗಳ ಮೂಲಕ ಆಡಳಿತಾರೂಢ ಸರ್ಕಾರವನ್ನು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರನ್ನು ಕಟ್ಟಿಹಾಕುವ ಹತಾಶ ಯತ್ನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾಪ್ರಭುತ್ವದ ಅಡಿಪಾಯವೇ ಸಂವಿಧಾನ ಮತ್ತು ಕಾನೂನಿನ ಆಡಳಿತ. ನಾವೆಂದೂ ಕಾನೂನಾತ್ಮಕ ತನಿಖೆ ಅಥವಾ ಪ್ರಕ್ರಿಯೆಗಳ ವಿರುದ್ಧವಲ್ಲ; ಆದರೆ ಆ ತನಿಖೆಗಳು ಯಾವುದೇ ರಾಜಕೀಯ ಪಕ್ಷಪಾತವಿಲ್ಲದೆ, ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಆದರೆ ಇಂದಿನ ದಿನಗಳಲ್ಲಿ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಹ ವಾತಾವರಣ ಸೃಷ್ಟಿಯಾಗಿರುವುದು ಆರೋಗ್ಯಕರ ಪ್ರಜಾಪ್ರಭುತ್ವದ ಲಕ್ಷಣವಲ್ಲ.
ಇಂತಹ ರಾಜಕೀಯ ತಂತ್ರಗಾರಿಕೆ, ಆಡಳಿತಾತ್ಮಕ ಒತ್ತಡ ಅಥವಾ ಬೆದರಿಕೆಗಳಿಗೆ ಸತೀಶ್ ಜಾರಕಿಹೊಳಿ ಅವರಾಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಎಂದಿಗೂ ಎದೆಗುಂದುವುದಿಲ್ಲ. ಸತ್ಯ, ಸಂವಿಧಾನ ಮತ್ತು ಜನರ ಆಶೀರ್ವಾದ ಸದಾ ನಮ್ಮೊಂದಿಗಿದೆ. ಈ ಎಲ್ಲ ರಾಜಕೀಯ ಸವಾಲುಗಳನ್ನು ಕಾನೂನಾತ್ಮಕವಾಗಿ ಹಾಗೂ ಪ್ರಜಾಸತ್ತಾತ್ಮಕ ಹೋರಾಟದ ಮೂಲಕವೇ ನಾವು ಎದುರಿಸಲಿದ್ದೇವೆ. ಯುವ ಕಾಂಗ್ರೆಸ್ ಸದಾ ಸತೀಶ್ ಜಾರಕಿಹೊಳಿ ಅವರ ಪರವಾಗಿ ಬಂಡೆಯಂತೆ ಗಟ್ಟಿಯಾಗಿ ನಿಲ್ಲಲಿದೆ ಎಂದು ಪವನ್ ನಾಯ್ಕ ಸ್ಪಷ್ಟಪಡಿಸಿದ್ದಾರೆ.
