ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ದಲಿತ ಚಾಲಕನಿಗೆ ಜಾತಿ ನಿಂದನೆ, ಹಲ್ಲೆ-ಕೊಲೆ ಬೆದರಿಕೆ!

Pakka News Web • 8 ಜುಲೈ 2026,

ಸಾರ್ವಜನಿಕ ಆಟೋ ಸ್ಟ್ಯಾಂಡ್‌ನಲ್ಲಿ ಆಟೋ ನಿಲ್ಲಿಸಿದ್ದ ಕಾರಣಕ್ಕೆ ಪರಿಶಿಷ್ಟ ಜಾತಿಗೆ ಸೇರಿದ ಆಟೋ ಚಾಲಕನೊಬ್ಬನಿಗೆ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಗಂಭೀರ ಘಟನೆ ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪರಿಶಿಷ್ಟ ಜಾತಿಗೆ ಸೇರಿದ ಆಟೋ ಚಾಲಕ ಪ್ರಸನ್ನ ಜಟ್ಟಿ ಮುಕ್ರಿ ಅವರು ನೀಡಿದ ದೂರಿನ ಮೇರೆಗೆ ದಾಮು ಉಪ್ಪಾರ, ಗಣಪತಿ ಉಪ್ಪಾರ ಹಾಗೂ ರಾಜೇಶ ಉಪ್ಪಾರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರು ಪ್ರಕಾರ, ಜೂನ್ 19ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಪ್ರಸನ್ನ ಅವರು ಹೊಸ ಬಸ್ ನಿಲ್ದಾಣದ ಸಮೀಪದ ಸಾರ್ವಜನಿಕ ಆಟೋ ಸ್ಟ್ಯಾಂಡ್‌ನಲ್ಲಿ ತಮ್ಮ ಆಟೋ ರಿಕ್ಷಾವನ್ನು ಬಾಡಿಗೆಗಾಗಿ ನಿಲ್ಲಿಸಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಆರೋಪಿಗಳು, ಇದು ನಮ್ಮ ಕೇರಿಯವರಿಗೆ ಸೇರಿದ ಸ್ಟ್ಯಾಂಡ್, ನೀನು ಮುಕ್ರಿ ಜಾತಿಯವನು, ಇಲ್ಲಿ ರಿಕ್ಷಾ ನಿಲ್ಲಿಸಬಾರದು ಎಂದು ತಗಾದೆ ತೆಗೆದು ಜಾತಿ ಆಧಾರಿತ ಅವಹೇಳನ ಮಾಡಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರಸನ್ನ ಅವರು, ಇದು ಸಾರ್ವಜನಿಕ ಆಟೋ ಸ್ಟ್ಯಾಂಡ್, ಇಲ್ಲಿ ನಾನು ಗಾಡಿ ನಿಲ್ಲಿಸಿದರೆ ನಿಮಗೇನು ತೊಂದರೆ?” ಎಂದು ಪ್ರಶ್ನಿಸಿದಾಗ ಆರೋಪಿಗಳು ಮತ್ತಷ್ಟು ಉದ್ರಿಕ್ತಗೊಂಡು ಜಾತಿಯ ಹೆಸರೆತ್ತಿ ನಿಂದನೆ ಮಾಡಿದ್ದಾರೆ. ನಿನ್ನನ್ನು ಮುಟ್ಟಿದರೆ ನಾವು ಸ್ನಾನ ಮಾಡಬೇಕು, ರಿಕ್ಷಾ ತೆಗೆದು ಹೋಗು; ಇಲ್ಲದಿದ್ದರೆ ಆಟೋಗೆ ಬೆಂಕಿ ಹಚ್ಚುತ್ತೇವೆಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಅಲ್ಲೇ ನಿಲ್ಲದೆ, ಆರೋಪಿ ದಾಮು ಉಪ್ಪಾರನು ಪ್ರಸನ್ನ ಅವರ ಎದೆಗೆ ಕೈಯಿಂದ ಹೊಡೆದು ಕೆಳಗೆ ದೂಡಿದನೆಂದು ಆರೋಪಿಸಲಾಗಿದೆ. ಜೊತೆಗೆ, ಮುಂದೆಯೂ ಇದೇ ಸ್ಥಳದಲ್ಲಿ ಆಟೋ ನಿಲ್ಲಿಸಿ ದಂಧೆ ನಡೆಸಿದರೆ ತಲೆ ಒಡೆದು ಕೊಲ್ಲುವುದಾಗಿ ಮೂವರೂ ಸೇರಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಸನ್ನ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಿಂದ ಆತಂಕಕ್ಕೊಳಗಾದ ಪ್ರಸನ್ನ ಅವರು ಜುಲೈ 8ರಂದು ಕುಮಟಾ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250