ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಉಪ್ಪಳೇಶ್ವರದಲ್ಲಿ ಬೇಟೆಗಾರರ ಉಪಟಳ!

Pakka News Web • 9 ಸೆಪ್ಟೆಂ 2026,

ಯಲ್ಲಾಪುರ: ಕಾಡಿನಲ್ಲಿ ಮೌನವಾಗಿ ನಡೆಯುತ್ತಿದ್ದ ಬೇಟೆಯ ಕರಾಳ ಕಥೆಯೊಂದು ಉಪ್ಪಳೇಶ್ವರದಲ್ಲಿ ಬಯಲಾಗಿದೆ. ಪ್ಯಾಂಗೋಲಿನ್‌ನ ಚಿಪ್ಪು, ಹುಲಿ–ಚಿರತೆಯ ಉಗುರು ಮತ್ತು ಹಲ್ಲು, ಕಾಡೆಮ್ಮೆಯ ಕೊಂಬು ಸೇರಿದಂತೆ ಅಪರೂಪದ ವನ್ಯಜೀವಿ ಅವಶೇಷಗಳ ಭಾರೀ ಸಂಗ್ರಹ ಅರಣ್ಯ ಇಲಾಖೆಯ ಬಲೆಗೆ ಬಿದ್ದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಶಿರಸಿ ಅರಣ್ಯ ಸಂಚಾರಿ ದಳಕ್ಕೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಯಲ್ಲಾಪುರ ತಾಲೂಕಿನ ಉಪ್ಪಳೇಶ್ವರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಅನುಮಾನಾಸ್ಪದವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ತಡೆದು ಪರಿಶೀಲಿಸಿದಾಗ, ಅವರ ಬಳಿಯಿದ್ದ ವಸ್ತುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ.

ಪರಿಶೀಲನೆಯ ವೇಳೆ 15.748 ಕೆ.ಜಿ. ಪ್ಯಾಂಗೋಲಿನ್ ಚಿಪ್ಪುಗಳು, ಎರಡು ಭಾರತೀಯ ಕಾಡೆಮ್ಮೆ (ಗೌರ್) ಕೊಂಬುಗಳು, ಎಂಟು ಹುಲಿ ಉಗುರುಗಳು, 12 ಚಿರತೆ ಉಗುರುಗಳು, ಎರಡು ಹುಲಿ ಹಲ್ಲುಗಳು, ಮೂರು ಚಿರತೆ ಹಲ್ಲುಗಳು ಹಾಗೂ ಆರು ಕಾಡುಹಂದಿ ಹಲ್ಲುಗಳು ಪತ್ತೆಯಾಗಿವೆ. ವನ್ಯಜೀವಿ ಉತ್ಪನ್ನಗಳ ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ಒಂದು ಬೈಕ್ ಮತ್ತು ಒಂದು ಸ್ಕೂಟರ್‌ನ್ನೂ ವಶಕ್ಕೆ ಪಡೆಯಲಾಗಿದೆ.

ಇದು ಕೇವಲ ಇಬ್ಬರ ಅಕ್ರಮ ಸಾಗಾಟದ ಪ್ರಕರಣವೇ ಅಥವಾ ಇದರ ಹಿಂದೆ ದೊಡ್ಡ ವನ್ಯಜೀವಿ ಕಳ್ಳಸಾಗಣೆ ಜಾಲವೇ ಇದೆ ಎಂಬ ಪ್ರಶ್ನೆ ಇದೀಗ ತನಿಖೆಯ ಕೇಂದ್ರಬಿಂದುವಾಗಿದೆ. ವಶಪಡಿಸಿಕೊಂಡಿರುವ ವನ್ಯಜೀವಿ ಉತ್ಪನ್ನಗಳು ಎಲ್ಲಿಂದ ಬಂದವು, ಯಾರಿಂದ ಸಂಗ್ರಹಿಸಲಾಯಿತು, ಯಾರಿಗೆ ತಲುಪಿಸಬೇಕಿತ್ತು ಎಂಬುದರ ಕುರಿತು ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ತನಿಖೆಯ ವೇಳೆ ಈ ಜಾಲಕ್ಕೆ ಸಂಬಂಧಿಸಿದ ಇನ್ನೂ ಕೆಲವರು ತಲೆಮರೆಸಿಕೊಂಡಿರುವ ಮಾಹಿತಿ ಲಭ್ಯವಾಗಿದ್ದು, ಅವರ ಪತ್ತೆಗಾಗಿ ಅರಣ್ಯ ಇಲಾಖೆ ಬಲೆ ಬೀಸಿದೆ. ಹೀಗಾಗಿ ಉಪ್ಪಳೇಶ್ವರದ ಕಾರ್ಯಾಚರಣೆ ಮತ್ತಷ್ಟು ದೊಡ್ಡ ವನ್ಯಜೀವಿ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆಯುವ ಸಾಧ್ಯತೆಯೂ ಇದೆ.

ಬಂಧಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

APCCF ಮನೋಜ್ ತ್ರಿಪಾಠಿ, IFS ಹಾಗೂ DCF ಸಂದೀಪ್ ಸೂರ್ಯವಂಶಿ, IFS ಅವರ ಮಾರ್ಗದರ್ಶನದಲ್ಲಿ ACF ರಾಘವೇಂದ್ರ ನಾಯಕ್, RFO ಶಿಲ್ಪಾ ನಾಯಕ್ ಹಾಗೂ ಸಿರ್ಸಿ FMS ತಂಡ ಕಾರ್ಯಾಚರಣೆ ನಡೆಸಿದೆ.

ವನ್ಯಜೀವಿಗಳ ಅವಶೇಷಗಳನ್ನು ಸಂಗ್ರಹಿಸಿ ಅಕ್ರಮವಾಗಿ ಮಾರಾಟ ಅಥವಾ ಸಾಗಾಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಮುಂದುವರಿಸಲಾಗುವುದು ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250