ಕಾರವಾರ: ಗೋವಾದಿಂದ ಕಾರವಾರದತ್ತ ಬೈಕ್‌ನಲ್ಲಿ ಬರುತ್ತಿದ್ದ ಯುವಕನೊಬ್ಬ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆ ಇದ್ದ ದನಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಕಾರವಾರದ ಪೋಸ್ಟ್ ಚೆಂಡಿಯಾ ವ್ಯಾಪ್ತಿಯ ಗುಣಭಾಗ ನಿವಾಸಿ ಮಹೇಂದ್ರ ಗುನಗಿ ಎಂದು ಗುರುತಿಸಲಾಗಿದೆ. ಲಭ್ಯ ಮಾಹಿತಿಯ ಪ್ರಕಾರ, ಗೋವಾದಿಂದ ಕಾರವಾರದತ್ತ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಇದ್ದ ದನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹೇಂದ್ರ ಅವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡರು. ಸ್ಥಳೀಯರ ನೆರವಿನಿಂದ ಅವರನ್ನು ತಕ್ಷಣ ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮಹೇಂದ್ರ ಅವರು ಬಿಣಗಾ ಕಾರ್ಖಾನೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
