ಕಾರವಾರ: ಕಾರವಾರ ತಾಲೂಕಿನ ಮಾಜಾಳಿ ತಪಾಸಣಾ ಕೇಂದ್ರದ ಬಳಿ ಅಬಕಾರಿ ಇಲಾಖೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1,296 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ.

ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ, ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನ ಹಾಗೂ ಅಬಕಾರಿ ಉಪ ಅಧೀಕ್ಷಕರ ಆದೇಶದ ಮೇರೆಗೆ ಜೂನ್ 28ರಂದು ರಸ್ತೆಗಾವಲು ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಗಳು ಅನುಮಾನಾಸ್ಪದ ವಾಹನವನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪೆರಿಯಾ ಗ್ರಾಮದ 32 ವರ್ಷದ ಮನ್ಸೂರ್ ಮುಹಮ್ಮದ್ ಎಂಬಾತ ಅಶೋಕ್ ಲೇಲ್ಯಾಂಡ್ ಸರಕು ಸಾಗಣೆ ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೆ ಕರ್ನಾಟಕ ರಾಜ್ಯಕ್ಕೆ ವಿವಿಧ ಬ್ರ್ಯಾಂಡ್‌ನ ಒಟ್ಟು 1,296 ಲೀಟರ್ ಮದ್ಯವನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಕಾರ್ಯಾಚರಣೆಯಲ್ಲಿ ಸುಮಾರು 9 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ 8 ಲಕ್ಷ ರೂ. ಮೌಲ್ಯದ ವಾಹನವನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಕರ್ನಾಟಕ ಅಬಕಾರಿ ಕಾಯ್ದೆಯ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
