ರಸ್ತೆ ಅಪಘಾತದಲ್ಲಿ ಸಿಲುಕಿ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿ ಹುಬ್ಬಳ್ಳಿಯ ಕಿಮ್ಸ್ (ಕೆ.ಎಂ.ಸಿ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಾಂಡೇಲಿ ಗಾಂಧಿನಗರದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಗಾಂಧಿನಗರದ ನಿವಾಸಿಯಾದ ಲಕ್ಷ್ಮೀ ಸಾವಂತ ಕುಮಾರ್ ಬೋವಿವಡ್ಡರ (42) ಮೃತಪಟ್ಟ ಮಹಿಳೆ. ಕಳೆದ ಜುಲೈ 7 ರಂದು ರಾತ್ರಿ ಇವರು ತಮ್ಮ ಪತಿ ಸಾವಂತ ಕುಮಾರ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಶಿರಸಿ ಕಡೆಯಿಂದ ದಾಂಡೇಲಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಯಲ್ಲಾಪುರ ತಾಲೂಕಿನ ಉಮ್ಮಚ್ಚಗಿ ಸಮೀಪ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಬಿದ್ದ ಪರಿಣಾಮ ಲಕ್ಷ್ಮೀ ಅವರ ತಲೆಗೆ ಗಂಭೀರ ಪೆಟ್ಟಾಗಿತ್ತು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಗಾಯದ ತೀವ್ರತೆ ಹೆಚ್ಚಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕೆ.ಎಂ.ಸಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸಾವಿನೊಂದಿಗೆ ಹೋರಾಡುತ್ತಿದ್ದ ಲಕ್ಷ್ಮೀ ಅವರು, ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲೇ ವಿಧಿವಶರಾಗಿದ್ದಾರೆ.
ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು!
