ಅಂಕೋಲಾ: ಪಟ್ಟಣದ ಹೋಟೆಲ್ ಒಂದರಲ್ಲಿ ಊಟದ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗಿದ್ದು, ಈ ಸಂಬಂಧ 11 ಜನರ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ರಾತ್ರಿ ಪಟ್ಟಣದ ಗುಡಗಾರ ಗಲ್ಲಿಯಲ್ಲಿರುವ ಸುದರ್ಶನ ಹೋಟೆಲ್‌ನಲ್ಲಿ ಈ ಘಟನೆ ಸಂಭವಿಸಿದೆ. ಹೋಟೆಲ್‌ನಲ್ಲಿ ಊಟದ ವಿಚಾರವಾಗಿ ಆರಂಭವಾದ ಸಣ್ಣ ಮಾತಿನ ಚಕಮಕಿ, ಕ್ಷಣಾರ್ಧದಲ್ಲೇ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಅವಾಚ್ಯ ಶಬ್ದಗಳ ಬೈದಾಟ ಹಾಗೂ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಹಾಬಲೇಶ್ವರ ನಾಯಕ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಜಗಳವನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ನಡೆಸಿದರು. ಆದರೆ, ಪೊಲೀಸರ ಎಚ್ಚರಿಕೆಗೆ ಕಿವಿಕೊಡದ ಆರೋಪಿಗಳು ತಮ್ಮ ಉದ್ಧಟತನ ಮುಂದುವರಿಸಿ, ಸಾರ್ವಜನಿಕ ಶಾಂತಿಗೆ ಧಕ್ಕೆ ತಂದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಒಂದು ಗುಂಪಿನ ನಿರಂಜನ ಹರಿಕಂತ್ರ (ಕಣಗಿಲ್), ಮನೋಜ್‌ಕುಮಾರ್ ಖಾರ್ವಿ (ಉಪ್ಪುಂದ), ಕಿಶೋರ ಮೊಗವೀರ (ಉಪ್ಪುಂದ), ಸೂರಜ ಹೊಸಕಟ್ಟಾ (ಗೋಕರ್ಣ), ದೀಪಕ ಹರಿಕಂತ್ರ (ಕಣಗಿಲ್), ರಂಜನ ಗೋವಿಂದ ಹರಿಕಂತ್ರ (ಕಣಗಿಲ್) ಹಾಗೂ ಮತ್ತೊಂದು ಗುಂಪಿನ ಪ್ರಶಾಂತ ನಾಯಕ (ಅಂಕೋಲಾ), ಗಣಪತಿ ನಾಯಕ (ಅಂಕೋಲಾ), ರಾಘವೇಂದ್ರ ಅಂಬಿಗ (ಬೇಲೆಹಿತ್ತಲ), ನಾರಾಯಣ ಗುನಗಾ (ಸೂರ್ವೆ) ಮತ್ತು ಸದಾನಂದ ನಾಯ್ಕ (ಅಂಕೋಲಾ) ಸೇರಿದಂತೆ ಒಟ್ಟು 11 ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಂಕೋಲಾ ಪೊಲೀಸರು ಕಾನೂನು ಕ್ರಮಕೈಗೊಂಡಿದ್ದಾರೆ.
