ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

State-National

ರಾಜ್ಯದಲ್ಲಿ ಶೇ.39ರಷ್ಟು ಮಳೆ ಕೊರತೆ!  

Pakka News Web • 19 ಜುಲೈ 2026,

ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಅಭಾವ ಸೃಷ್ಟಿಯಾಗಿದ್ದು, ಒಟ್ಟಾರೆ ಶೇ. 39ರಷ್ಟು ಮಳೆ ಕೊರತೆಯಾಗಿದೆ. ಕೃಷಿ ಚಟುವಟಿಕೆಗಳು ಕುಂಠಿತಗೊಂಡು, ಜಲಾಶಯಗಳ ಒಳಹರಿವು ಅರ್ಧಕ್ಕೆ ಕುಸಿದಿರುವುದರಿಂದ ರಾಜ್ಯದ ಹಲವೆಡೆ ಬರ ಪರಿಸ್ಥಿತಿ ಎದುರಾಗಿದೆ. ಈ ಭೀಕರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾರ್ವಜನಿಕರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗ ಖಾತರಿಪಡಿಸಲು ಯುದ್ಧೋಪಾದಿಯಲ್ಲಿ ಸಜ್ಜಾಗುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಭಾನುವಾರ ವಿಧಾನಸೌಧದಲ್ಲಿ ನಡೆದ ವೀಡಿಯೊ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದರು.

ರಾಜ್ಯದಲ್ಲಿ ಜುಲೈ 18ರವರೆಗೆ ದಾಖಲಾಗಿರುವ ಅಂಕಿ-ಅಂಶಗಳ ಪ್ರಕಾರ ವಲಯವಾರು ಮಳೆ ಕೊರತೆ ತೀವ್ರವಾಗಿದೆ. ಮಲೆನಾಡಿನಲ್ಲಿ ಶೇ. -43, ಕರಾವಳಿಯಲ್ಲಿ ಶೇ. -35, ಉತ್ತರ ಒಳನಾಡಿನಲ್ಲಿ ಶೇ. -33 ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ. -31 ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ ಒಟ್ಟು 158 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದ್ದು, ಈ ಪೈಕಿ 20 ತಾಲೂಕುಗಳು ಭೀಕರ ಪರಿಸ್ಥಿತಿ ಎದುರಿಸುತ್ತಿವೆ. ಜಿಲ್ಲಾವಾರು ನೋಡಿದರೆ ವಿಜಯನಗರ ಜಿಲ್ಲೆಯಲ್ಲಿ ಅತ್ಯಧಿಕ ಶೇ. -67 ರಷ್ಟು ತೀವ್ರ ಮಳೆ ಕೊರತೆ ದಾಖಲಾಗಿದೆ.

ಒಟ್ಟಾರೆ 509 ಹೋಬಳಿಗಳಲ್ಲಿ ಸಾಮಾನ್ಯ ಕೊರತೆ ಹಾಗೂ 118 ಹೋಬಳಿಗಳಲ್ಲಿ ತೀವ್ರ ಮಳೆ ಕೊರತೆ ಕಂಡುಬಂದಿದೆ. ಜಲಾಶಯಗಳ ಸ್ಥಿತಿಯೂ ಆತಂಕಕಾರಿಯಾಗಿದ್ದು, ಪ್ರಮುಖ ಜಲಾಶಯಗಳಲ್ಲಿ ಪ್ರಸ್ತುತ ಕೇವಲ ಶೇ. 40 ರಷ್ಟು ಮಾತ್ರ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ 681.83 ಟಿಎಂಸಿ ನೀರಿಗೆ ಹೋಲಿಸಿದರೆ ಈ ಬಾರಿ ಕೇವಲ 359.98 ಟಿಎಂಸಿ ನೀರಿದ್ದು, ಸಂಗ್ರಹವು ಅರ್ಧದಷ್ಟಕ್ಕೆ ಕುಸಿದಿದೆ. ಜಲವಿದ್ಯುತ್ ಉತ್ಪಾದಿಸುವ ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಸರಾಸರಿ ನೀರಿನ ಮಟ್ಟ ಕೇವಲ ಶೇ. 23ಕ್ಕೆ ಇಳಿದಿದೆ.

ಈ ಕಠಿಣ ಪರಿಸ್ಥಿತಿಯಿಂದಾಗಿ ರಾಜ್ಯದ 122 ತಾಲೂಕುಗಳ 539 ಗ್ರಾಮ ಪಂಚಾಯತ್‌ಗಳಲ್ಲಿ ಹಾಗೂ 17 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೀವ್ರ ನೀರಿನ ಸಮಸ್ಯೆ ತಲೆದೋರಿದೆ. ಕೃಷಿ ಕ್ಷೇತ್ರದಲ್ಲೂ ಬಿತ್ತನೆ ಕುಂಠಿತಗೊಂಡಿದ್ದು, 84.10 ಲಕ್ಷ ಹೆಕ್ಟೇರ್ ಗುರಿಯಲ್ಲಿ ಕೇವಲ 43.98 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಹೀಗಾಗಿ ರೈತರಿಗೆ ನೀರಿನ ಲಭ್ಯತೆ ಆಧರಿಸಿ ಸೂಕ್ತ ಪರ್ಯಾಯ ಬೆಳೆ ಬೆಳೆಯಲು ಮಾಹಿತಿ ನೀಡಲು ಕೃಷಿ ಇಲಾಖೆಗೆ ಸೂಚಿಸಲಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವನ್ನು ಖಾತ್ರಿಪಡಿಸಲು ಲಭ್ಯವಿರುವ ನೀರಾವರಿ ಸೌಲಭ್ಯಗಳನ್ನು ಬಳಸಿ ಮೇವಿನ ಬೀಜ ಬಿತ್ತನೆ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.

ಬರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ವಿಪತ್ತು ಪಿ.ಡಿ. ಖಾತೆಯಲ್ಲಿ ಪ್ರಸ್ತುತ 329.60 ಕೋಟಿ ರೂ. ಅನುದಾನ ಲಭ್ಯವಿದ್ದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ವಿಧಾನಸಭಾ ವ್ಯಾಪ್ತಿಗೆ ಹೆಚ್ಚುವರಿಯಾಗಿ ತಲಾ 1 ಕೋಟಿ ರೂ. ಒದಗಿಸಲಾಗುವುದು ಎಂದು ಸಿಎಂ ಪ್ರಕಟಿಸಿದರು. ಬೋರ್‌ವೆಲ್ ದುರಸ್ತಿ, ಪಂಪಿಂಗ್ ಮೆಷಿನ್ ಹಾಗೂ ವಿದ್ಯುತ್ ಸಂಪರ್ಕಕ್ಕೆ ತಕ್ಷಣ ಸ್ಥಳೀಯವಾಗಿಯೇ ಕ್ರಮ ಕೈಗೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಬೋಗಸ್ ಬೋರ್‌ವೆಲ್ ದಾಖಲೆ ಸೃಷ್ಟಿಸಬಾರದು, ಹಾಗೇನಾದರೂ ಆದಲ್ಲಿ ಜಿಲ್ಲಾಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಮುಂದಿನ 15 ದಿನಗಳ ಒಳಗಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯದ ಬರ ಪರಿಸ್ಥಿತಿ ಕುರಿತು ಸಮಗ್ರ ವರದಿ ಸಲ್ಲಿಸಬೇಕಾಗಿರುವುದರಿಂದ, ಎಲ್ಲಾ ಜಿಲ್ಲಾಧಿಕಾರಿಗಳು ಸ್ವತಃ ಗ್ರಾಮಗಳಿಗೆ ಭೇಟಿ ನೀಡಿ ಒಂದು ವಾರದೊಳಗೆ ವರದಿ ಸಿದ್ಧಪಡಿಸಬೇಕು ಎಂದು ಗಡುವು ವಿಧಿಸಿದರು.

ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಡೆಯಲು ‘ವಿಬಿ ರಾಮ್ ಜಿ’ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಮತ್ತು ಪಂಚಾಯತ್ ಮಟ್ಟದಲ್ಲಿ ಗುತ್ತಿಗೆದಾರರ ಬದಲಾಗಿ ವೈಯಕ್ತಿಕ ಕುಟುಂಬಗಳಿಗೆ ಅನುಕೂಲವಾಗುವ ಜೀವನೋಪಾಯ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಹಳೆ ಕಾಮಗಾರಿಗಳಿಗೆ ಹೊಸ ಬಿಲ್ ಮಾಡುವ ದಂದೆಗೆ ಬ್ರೇಕ್ ಹಾಕಬೇಕು ಹಾಗೂ ಪ್ರತಿ ಕಾಮಗಾರಿ ಸ್ಥಳದಲ್ಲಿ ವಿವರಗಳ ಬೋರ್ಡ್ ಅಳವಡಿಸುವುದನ್ನು ಕಡ್ಡಾಯಗೊಳಿಸಿದರು.

ಇದರೊಂದಿಗೆ ಎಲ್ಲಾ ಪಂಚಾಯತ್‌ಗಳಲ್ಲಿ ‘ಭಾರತ್ ಜೋಡೋ ಯೂತ್ ಕ್ಲಬ್‌’ಗಳನ್ನು ನೋಂದಾಯಿಸಿ ಮುಂದಿನ ತಿಂಗಳಿನಿಂದ ಚಟುವಟಿಕೆ ಆರಂಭಿಸಬೇಕು, ‘ಭೂ ಗ್ಯಾರಂಟಿ’ ಮತ್ತು ಪ್ರಜಾಸೇವೆ ಇಲಾಖೆಯ ಕಾರ್ಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಹಾಗೂ ಶುದ್ಧ ನೀರಿನ ಘಟಕಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.

ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೆ ಕಡ್ಡಾಯವಾಗಿ ಎರಡು ದಿನ ಹಾಗೂ ಶಾಸಕರು ಹೋಬಳಿ ಮಟ್ಟದಲ್ಲಿ ಜನರ ಬಳಿ ತೆರಳಿ ಅಹವಾಲು ಆಲಿಸಬೇಕು ಎಂದು ಸೂಚಿಸಿದ ಮುಖ್ಯಮಂತ್ರಿಗಳು, ಬರ ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪ ಅಥವಾ ದೂರುಗಳಿಗೆ ಆಸ್ಪದ ನೀಡದೆ, ಅಧಿಕಾರಿಗಳು ಒಟ್ಟಾಗಿ ‘ಟೀಮ್’ ಆಗಿ ಕೆಲಸ ಮಾಡಬೇಕು, ನಿಮ್ಮ ದಿನನಿತ್ಯದ ಚಟುವಟಿಕೆಗಳ ಮೇಲೆ ಸರ್ಕಾರ ನಿರಂತರ ನಿಗಾ ಇರಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವರಾದ ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ, ಯು.ಟಿ. ಖಾದರ್, ಯತೀಂದ್ರ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250