ಮದುವೆಯಾಗಿ ದಶಕ ಕಳೆದರೂ ಮಕ್ಕಳಾಗದ ನೋವು ಹಾಗೂ ಇತ್ತೀಚೆಗಷ್ಟೇ ಪತಿಯನ್ನು ಕಳೆದುಕೊಂಡ ದುಃಖದಿಂದ ಕಂಗೆಟ್ಟಿದ್ದ ಅಂಗನವಾಡಿ ಸಹಾಯಕಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶೋಚನೀಯ ಘಟನೆ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಸಂಭವಿಸಿದೆ.
ನಂದಿಕಟ್ಟಾ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಗಂಗವ್ವಾ ಮಹೇಶ ತೇರೇಗಾಂವ (38) ಸಾವನ್ನಪ್ಪಿದ ದುರ್ದೈವಿ. ಗಂಗವ್ವಾ ಅವರಿಗೆ ಮದುವೆಯಾಗಿ 10 ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಇದೇ ನೋವಿನ ನಡುವೆ, ಪಾರ್ಶ್ವವಾಯು ಪೀಡಿತರಾಗಿದ್ದ ಅವರ ಪತಿ ಮಹೇಶ್ ಅವರು ಕೆಲವು ದಿನಗಳ ಹಿಂದಷ್ಟೇ ನಿಧನರಾಗಿದ್ದರು.
ಪತಿಯ ಅಗಲಿಕೆಯಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಅವರಿಗೆ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು. ಇದೇ ಮನೋವೇದನೆಯಲ್ಲಿದ್ದ ಗಂಗವ್ವಾ ಅವರು ಗ್ರಾಮದ ದೊಡ್ಡ ಕೆರೆಗೆ ಹಾರಿ ಪ್ರಾಣತ್ಯಾಗ ಮಾಡಿದ್ದು, ಸೋಮವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
