ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಆಹಾರ ಸುರಕ್ಷತೆಗೆ ಕಠಿಣ ಕಾಯ್ದೆ: ಸಚಿವ ಯು.ಟಿ. ಖಾದರ್

Pakka News Web • 21 ಜುಲೈ 2026,

ಕಾರವಾರ: ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಜಂಕ್ ಫುಡ್ ಸಿಗದಂತೆ ತಡೆಯಲು ‘ಫುಡ್ ಸೇಫ್ಟಿ ಆಕ್ಟ್’ ಅಡಿಯಲ್ಲಿ ಕಠಿಣ ನಿಯಮ ರೂಪಿಸಲಾಗುವುದು ಹಾಗೂ ಆಹಾರ ಕಲಬೆರಕೆ ತಡೆಯಲು ಹೈ-ಟೆಕ್ ಲ್ಯಾಬ್ ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ. ಕೇವಲ ಆಸ್ಪತ್ರೆಗಳನ್ನು ಕಟ್ಟುವುದು ತಮ್ಮ ಉದ್ದೇಶವಲ್ಲ, ಜನರಿಗೆ ಆಸ್ಪತ್ರೆಯ ಅಗತ್ಯವೇ ಬರದಂತೆ ತಡೆಗಟ್ಟುವ ವಾತಾವರಣ ನಿರ್ಮಿಸುವುದು ತಮ್ಮ ಗುರಿ ಎಂದು ಅವರು ಪ್ರತಿಪಾದಿಸಿದರು.

ಕುಮಟಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ ಹಾಗೂ ಬಿಇಎಲ್ ಸಂಸ್ಥೆಯ ಸಿ.ಎಸ್.ಆರ್. ನಿಧಿಯಲ್ಲಿ ನಿರ್ಮಿಸಲಾದ ‘ಟ್ರಾಮಾ ಕೇರ್ ಸೆಂಟರ್ ಮತ್ತು ತುರ್ತು ಚಿಕಿತ್ಸಾ ಘಟಕ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ, ಕಲಬೆರಕೆ ಅಥವಾ ಕಳಪೆ ಆಹಾರ ಮಾರಾಟ ಮಾಡುವ ಕಂಪನಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇತ್ತೀಚೆಗೆ ಹೃದಯಾಘಾತ, ಕ್ಯಾನ್ಸರ್, ಕಿಡ್ನಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಉತ್ತಮ ಜೀವನಶೈಲಿ ಮತ್ತು ಪರಿಸರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದರು.

ಇದೇ ವೇಳೆ, ರಾಜ್ಯದಲ್ಲಿ ಅಪಘಾತಕ್ಕೆ ಒಳಗಾಗುವ ಯಾವುದೇ ದೇಶ, ವಿದೇಶ ಅಥವಾ ಇತರೆ ರಾಜ್ಯದ ವ್ಯಕ್ತಿಗಳಿಗೆ ಮೊದಲ 7 ದಿನಗಳವರೆಗೆ ಗರಿಷ್ಠ 2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು. ತುರ್ತು ಸಂದರ್ಭದಲ್ಲಿ ಕರೆ ಮಾಡಿದ 15 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪುವ ಹೊಸ ವ್ಯವಸ್ಥೆ ತರಲಾಗುತ್ತಿದ್ದು, ವಿಳಂಬವಾದರೆ ನಿರ್ವಹಣಾ ಸಂಸ್ಥೆಗೆ 3,000 ದಿಂದ 5,000 ವರೆಗೆ ದಂಡ ವಿಧಿಸಲಾಗುವುದು. ಜೊತೆಗೆ, ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಲು ಸೂಚಿಸಲಾಗಿದೆ ಎಂದರು.

ರಾಜ್ಯದ 3ನೇ ಟ್ರಾಮಾ ಕೇರ್ ಸೆಂಟರ್ ಆಗಿ ಆರಂಭಗೊಂಡಿರುವ ಈ ಘಟಕದ ಮೂಲಸೌಕರ್ಯಗಳಿಗೆ ಅನುದಾನ ನೀಡುವುದಾಗಿ ಅಭಯ ನೀಡಿದ ಸಚಿವರು, ಇಲ್ಲಿ ಆಧುನಿಕ ಮಾರ್ಚುರಿ ಕಟ್ಟಡ ನಿರ್ಮಿಸುವಂತೆ ಬಿಇಎಲ್ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ದಿನಕರ ಶೆಟ್ಟಿ ಮಾತನಾಡಿ, 2.73 ಕೋಟಿ ವೆಚ್ಚದ ಈ ಯೋಜನೆಗೆ ನೆರವಾದ ಬಿಇಎಲ್ ಸಂಸ್ಥೆ ಹಾಗೂ 1.70 ಕೋಟಿಗೂ ಹೆಚ್ಚು ಕೊಡುಗೆ ನೀಡಿದ ರೋಟರಿ ಕ್ಲಬ್‌ಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿ.ಪಂ. ಸಿಇಒ ಡಾ. ದಿಲೀಷ್ ಶಶಿ, ಎಸ್‌ಪಿ ದೀಪನ್ ಎಂ.ಎನ್, ಬಿಇಎಲ್ ನಿರ್ದೇಶಕ ರಜನೀಶ್ ಶರ್ಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250