ಕಾರವಾರ: ರೈಲು ಕ್ರಾಸಿಂಗ್‌ಗಾಗಿ ನಿಲುಗಡೆಗೊಂಡಿದ್ದ ವೇಳೆ ಪ್ರಯಾಣಿಕರೊಬ್ಬರ ಕೈಚೀಲವನ್ನು ಅಪರಿಚಿತರು ಕಳವು ಮಾಡಿ, ಪರಾರಿಯಾಗಿರುವ ಘಟನೆ ತಾಲೂಕಿನ ಅಸ್ನೋಟಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎಂದು ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 1,48,399 ರೂ. ಎಂದು ಅಂದಾಜಿಸಲಾಗಿದೆ.
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ನಿವಾಸಿ ಐ. ಜಾನ್ ಥಾಮಸ್ (56) ಅವರು ಸೆಪ್ಟೆಂಬರ್ 30ರಂದು ತಮ್ಮ ಪತ್ನಿಯೊಂದಿಗೆ ತಿರುನೆಲ್ವೇಲಿ ಜಂಕ್ಷನ್‌ನಿಂದ ಮಡಗಾಂವ್ ಜಂಕ್ಷನ್‌ಗೆ ತೆರಳುವ 22630 ಸಂಖ್ಯೆಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅಕ್ಟೋಬರ್ 1ರ ಬೆಳಗಿನ ಜಾವ ಸುಮಾರು 3.30ರ ವೇಳೆಗೆ ಕಾರವಾರ ತಾಲೂಕಿನ ಅಸ್ನೋಟಿ ರೈಲ್ವೆ ನಿಲ್ದಾಣದಲ್ಲಿ ರೈಲು ಕ್ರಾಸಿಂಗ್‌ಗಾಗಿ ನಿಂತಿತ್ತು. ಈ ಸಂದರ್ಭದಲ್ಲಿ ಅಪರಿಚಿತರು ಅವರ ಬಿಳಿ ಬಣ್ಣದ ಕೈಚೀಲದಲ್ಲಿದ್ದ 1,48,399 ರೂ.ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಾನ್ ಥಾಮಸ್ ಅವರು ಅಕ್ಟೋಬರ್ 2ರಂದು ಗೋವಾದ ಮಡಗಾಂವ್ ಕೊಂಕಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಘಟನೆ ನಡೆದ ಸ್ಥಳವು ಚಿತ್ತಾಕುಲಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿದೆ. ಚಿತ್ತಾಕುಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
