ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ದಕ್ಷ ಅಧಿಕಾರಿ PSI ನಾಗಪ್ಪ ಬಿ. ಅವರಿಗೆ ‘ಡಿಜಿ-ಐಜಿಪಿ’ ಶ್ಲಾಘನಾ ಚಿನ್ನದ ಪದಕದ ಗರಿ!

Pakka News Web • 24 ಜುಲೈ 2026,

ಸಿದ್ದಾಪುರ:ಪೊಲೀಸ್ ಇಲಾಖೆಯಲ್ಲಿ ತಮ್ಮ ದಕ್ಷ, ಪ್ರಾಮಾಣಿಕ ಹಾಗೂ ಜನಸ್ನೇಹಿ ಸೇವೆಯ ಮೂಲಕ ಸದಾ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುವ ಸಿದ್ದಾಪುರ ಠಾಣೆಯ ತನಿಖಾ ಪಿಎಸ್‌ಐ ನಾಗಪ್ಪ ಬಿ. ಅವರ ಸುದೀರ್ಘ ಸೇವಾ ಹಿರಿಮೆಗೆ ಮತ್ತೊಂದು ಪ್ರತಿಷ್ಠಿತ ಗೌರವ ಒಲಿದುಬಂದಿದೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಅದ್ಧೂರಿ ಸಮಾರಂಭದಲ್ಲಿ, ಪೊಲೀಸ್ ಇಲಾಖೆಯ ಅತ್ಯುನ್ನತ ‘ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ (ಡಿ.ಜಿ. ಮತ್ತು ಐ.ಜಿ.ಪಿ) ಶ್ಲಾಘನಾ ಚಿನ್ನದ ಪದಕ’ವನ್ನು ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ಅಪರಾಧ ಪತ್ತೆಯಲ್ಲಿ ತೋರಿದ ಕೌಶಲ, ಸಂಕೀರ್ಣ ಹಾಗೂ ಸವಾಲಿನ ಪ್ರಕರಣಗಳ ಯಶಸ್ವಿ ತನಿಖೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನೀಡಿದ ಪ್ರಮುಖ ಕೊಡುಗೆ ಮತ್ತು ಇಲಾಖೆಯ ಮೇಲಿನ ಅಪಾರ ಕರ್ತವ್ಯನಿಷ್ಠೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಈ ಹಿಂದೆ ಶಿರಸಿ ನಗರ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ, ಅಕ್ರಮ ಗಾಂಜಾ ದಂಧೆಯ ವಿರುದ್ಧ ಸಮರ ಸಾರಿ ಹಲವು ಪ್ರಮುಖ ಜಾಲಗಳನ್ನು ಭೇದಿಸಿದ್ದರು.

ಇವರು, ಸರ್ಕಾರದ ‘ಮನೆ ಮನೆಗೆ ಪೊಲೀಸ್’ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಶಿರಸಿ ಠಾಣೆಗೆ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ತಂದುಕೊಟ್ಟಿದ್ದರು. ಐತಿಹಾಸಿಕ ಶಿರಸಿ ಮಾರಿಕಾಂಬಾ ಜಾತ್ರೆಯ ಬಂದೋಬಸ್ತ್‌ ಅನ್ನು ಅತ್ಯಂತ ಚಾಕಚಕ್ಯತೆಯಿಂದ ನಿರ್ವಹಿಸಿ ಸಾರ್ವಜನಿಕರ ಭರವಸೆ ಹೆಚ್ಚಿಸಿದ್ದಲ್ಲದೆ, ಠಾಣೆಯನ್ನು ನವೀಕರಿಸಿ ‘ಜನಸ್ನೇಹಿ’ ವಾತಾವರಣ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೇವಲ ಭದ್ರತೆ ಮತ್ತು ತನಿಖೆಗೆಷ್ಟೇ ಸೀಮಿತವಾಗದೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ನಾಗಪ್ಪ ಬಿ. ಅವರು, ಸಮಾಜಮುಖಿ ಚಿಂತನೆಗಳ ಮೂಲಕ ಗಮನ ಸೆಳೆದಿದ್ದಾರೆ. ಇವರ ಸೇವೆ ಮತ್ತು ಸಾಹಿತ್ಯ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2025ರಲ್ಲಿ ಪ್ರತಿಷ್ಠಿತ ಪ್ರೆಸ್ ಕ್ಲಬ್ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿತ್ತು. ಇಲಾಖೆಯ ಯಾವುದೇ ಹೊಸ ಯೋಜನೆಯಾಗಲಿ, ಅದನ್ನು ಯಶಸ್ಸಿನತ್ತ ಮುನ್ನಡೆಸಿ ಸದಾ ಜಿಲ್ಲೆಯಲ್ಲೇ ಮುಂಚೂಣಿಯಲ್ಲಿ ನಿಲ್ಲುವ ಇವರ ನಾಯಕತ್ವ ಶಕ್ತಿಗೆ ಹಿರಿಯ ಅಧಿಕಾರಿಗಳಿಂದಲೂ ಹಲವು ಬಾರಿ ಶ್ಲಾಘನೆ ವ್ಯಕ್ತವಾಗಿದೆ.

ಈ ಹಿಂದೆ ಇವರ ಅಪಾರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ ನೀಡಿ ಗೌರವಿಸಿತ್ತು. ಇದೀಗ ಇಲಾಖೆಯ ಅತ್ಯುನ್ನತ ‘ಡಿ.ಜಿ-ಐ.ಜಿ.ಪಿ ಶ್ಲಾಘನಾ ಚಿನ್ನದ ಪದಕ’ವನ್ನು ಸ್ವೀಕರಿಸುವ ಮೂಲಕ ನಾಗಪ್ಪ ಬಿ. ಅವರು ತಮ್ಮ ಸೇವಾ ಪಯಣಕ್ಕೆ ಮತ್ತೊಂದು ಮೈಲಿಗಲ್ಲನ್ನು ಸೇರ್ಪಡೆಗೊಳಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಪಡೆಗೆ ಹೆಮ್ಮೆಯ ವಿಷಯವಾಗಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250