ಶಿರಸಿ: ತಾಲೂಕಿನ ಅಜ್ಜೀಬಳ ಸಮೀಪ ಎರಡು ದ್ವಿಚಕ್ರ ವಾಹನಗಳ ನಡುವೆ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಿದ್ದಾಪುರ ತಾಲೂಕಿನ ಮುತ್ತಳ್ಳಿ ಗ್ರಾಮದ ನಿವಾಸಿ ಸಿಂದೂರ ಹೆಗಡೆ (21) ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಗಿರೀಶ ಹಾಗೂ ಚಿತ್ರಾ ಎಂಬುವವರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ಎರಡೂ ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ರಭಸಕ್ಕೆ ಸಿಂದೂರ ಹೆಗಡೆ ಅವರಿಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಪ್ರಾಣ ಪಕ್ಷಿ ಹಾರಿಹೋಗಿದೆ. ಸುದ್ದಿ ತಿಳಿದ ತಕ್ಷಣವೇ ಶಿರಸಿ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಮುಂದಿನ ತನಿಖೆ ಕೈಗೊಂಡಿದ್ದಾರೆ.
