ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಯುವಕರು ತೀವ್ರವಾಗಿ ಗಾಯಗೊಂಡ ಘಟನೆ ಮುಂಡಗೋಡ ತಾಲೂಕಿನ ಲಕ್ಕೊಳ್ಳಿ ಕ್ರಾಸ್ ಬಳಿ ಶನಿವಾರ ಸಂಭವಿಸಿದೆ.
ಹಾನಗಲ್ ತಾಲೂಕಿನ ಅಕ್ಕಿಆಲೂರು ನಿವಾಸಿಗಳಾದ ಮಹ್ಮದಗೌಸ್ ಇಸ್ಮಾಯಿಲ್ ಸಾಬ್ ಸವಣೂರು ಹಾಗೂ ಮುಜರಮಿಲ್ ಅಪಘಾತದಲ್ಲಿ ಗಾಯಗೊಂಡವರು. ಶಿರಸಿ ಕಡೆಯಿಂದ ಮುಂಡಗೋಡಕ್ಕೆ ಬರುತ್ತಿದ್ದ ಬೈಕ್‌ಗೆ, ಎದುರಿನಿಂದ ಲಕ್ಕೊಳ್ಳಿ ಕಡೆಗೆ ತೆರಳುತ್ತಿದ್ದ ವ್ಯಾಗನಾರ್ ಕಾರು ನೇರವಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ತೀವ್ರ ಗಾಯಗೊಂಡ ಹಿಂಬದಿ ಸವಾರ ಮುಜರಮಿಲ್ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಚಾಲನೆ ಮಾಡುತ್ತಿದ್ದ ಮಹ್ಮದಗೌಸ್ ಅವರಿಗೂ ಬಲವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ಸಾರ್ವಜನಿಕರು ತಕ್ಷಣ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದರು. ವಿಷಯ ತಿಳಿದ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
