ದಾಂಡೇಲಿ–ಹಳಿಯಾಳ ರಸ್ತೆಯ ಅಜಗಾಂವ ಸಮೀಪ ರವಿವಾರ ತಡ ರಾತ್ರಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದಾಂಡೇಲಿಯಿಂದ ಹಳಿಯಾಳ ಕಡೆಗೆ ತೆರಳುತ್ತಿದ್ದ ಯಡೋಗಾ ಗ್ರಾಮದ ಸ್ವಿಫ್ಟ್ ಕಾರು ಹಾಗೂ ಹಳಿಯಾಳದಿಂದ ದಾಂಡೇಲಿ ಕಡೆಗೆ ಬರುತ್ತಿದ್ದ ಗದಗ ಮೂಲದ ಕ್ವಾಲಿಸ್ ಕಾರಿನ ನಡುವೆ ಈ ಅಪಘಾತ ಸಂಭವಿಸಿತು. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಕಾರುಗಳಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್‌ಐ ಶಿವಾನಂದ ನಾವದಗಿ ಹಾಗೂ ಸಿಬ್ಬಂದಿ, ಗಾಯಾಳುಗಳನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಒಳಪಡಿಸಲಾಯಿತು. ಘಟನಾಸ್ಥಳಕ್ಕೆ ಹಳಿಯಾಳ ಪಿಎಸ್‌ಐ ಕೃಷ್ಣ ಗೌಡ ಅರಕೇರಿ ಸಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಎರಡು ಕಾರುಗಳು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಸುಪರ್ದಿಯಲ್ಲಿವೆ.
