ಉತ್ತರ ಕನ್ನಡ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೋಮವಾರ ಗೋ-ಭಕ್ತರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ದೇಶೀಯ ಗೋವಂಶದ ರಕ್ಷಣೆಗಾಗಿ ಕೇಂದ್ರ ಮಟ್ಟದಲ್ಲಿ ಕಠಿಣ ಕಾನೂನು ಜಾರಿಗೊಳಿಸುವುದು ಹಾಗೂ ಪ್ರತ್ಯೇಕ ‘ಗೋ-ಪಾಲನೆ ಸಚಿವಾಲಯ’ವನ್ನು ತಕ್ಷಣ ಸ್ಥಾಪಿಸುವುದು ಈ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿತ್ತು. ಈ ಹಿಂದೆ ಕೋಟ್ಯಂತರ ಸಹಿಗಳನ್ನು ಸಲ್ಲಿಸಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಈ ಬಾರಿ ಪರಿಸರ ಸ್ನೇಹಿಯಾಗಿ ಎಲ್ಲಾ ಮಾಹಿತಿಗಳು, ಕಾನೂನು ಚೌಕಟ್ಟು ಹಾಗೂ ‘ಗೋಸಮ್ಮಾನ್ ಆಹ್ವಾನ್ ಅಭಿಯಾನ’ದ ವಿವರವಾದ ಕ್ರಿಯಾ ಯೋಜನೆಯನ್ನು ಡಿಜಿಟಲ್ ರೂಪದಲ್ಲಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು.
ಗೋ ಸಂಪತ್ತು ಗ್ರಾಮೀಣ ಆರ್ಥಿಕತೆಯ ಆಧಾರಸ್ತಂಭವಾಗಿದ್ದು, ನೈಸರ್ಗಿಕ ಕೃಷಿಯ ಮೂಲಕ ‘ಆತ್ಮನಿರ್ಭರ ಭಾರತ’ ಕಟ್ಟಲು ಗೋ ರಕ್ಷಣೆ ಅತ್ಯಗತ್ಯ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು. ಗೋವುಗಳಿಗೆ “ರಾಷ್ಟ್ರ-ಮಾತಾ” ಎಂಬ ಸಾಂವಿಧಾನಿಕ ಮಾನ್ಯತೆ ನೀಡುವುದು, ಗೋಹತ್ಯೆ ಮತ್ತು ಕಳ್ಳಸಾಗಣೆಗೆ ಜೀವಾವಧಿ ಶಿಕ್ಷೆ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತಹ ಜಾಮೀನುರಹಿತ ಕಠಿಣ ಕಾನೂನು ತರುವುದು ಅವರ ಪ್ರಮುಖ ಒತ್ತಾಯವಾಗಿದೆ. ಜೊತೆಗೆ, ಕಸಾಯಿಖಾನೆಗಳ ಪರವಾನಗಿ ರದ್ದು, ಶಾಲಾ ಮಧ್ಯಾಹ್ನದ ಊಟ ಮತ್ತು ದೇವಾಲಯಗಳ ಪ್ರಸಾದದಲ್ಲಿ ದೇಶಿ ತುಪ್ಪ-ಹಾಲು ಕಡ್ಡಾಯಗೊಳಿಸುವುದು, ಶಾಲಾ ಪಠ್ಯದಲ್ಲಿ ‘ಗೋ-ವಿಜ್ಞಾನ’ ಸೇರಿಸುವುದು ಹಾಗೂ ಪ್ರತಿಯೊಂದು ಪಂಚಾಯತಿ ಮಟ್ಟದಲ್ಲಿ ನಂದಿಶಾಲೆ ಮತ್ತು ಹೆದ್ದಾರಿಗಳಲ್ಲಿ ಗೋ-ಆಂಬ್ಯುಲೆನ್ಸ್ ಸ್ಥಾಪಿಸುವಂತೆ ಮನವಿಯಲ್ಲಿ ಕೋರಲಾಗಿದೆ. ಗಜೇಂದ್ರ ಎಸ್. ಬೇಲೆಮನೆ ಸೇರಿದಂತೆ ಕರಾವಳಿ ಜಿಲ್ಲೆಯ ಪ್ರಮುಖ ಮುಖಂಡರ ಸಮ್ಮುಖದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಕೇಂದ್ರ ಸರ್ಕಾರವು ಗೋ ರಕ್ಷಣೆಯನ್ನು ರಾಷ್ಟ್ರೀಯ ವಿಷಯವಾಗಿ ಪರಿಗಣಿಸಿ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
