ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವೈದ್ಯಕೀಯ ಶಿಕ್ಷಣ ಸಂಸ್ಥೆಯಾದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಕ್ರಿಮ್ಸ್) ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಮ್ಸಿ) ಭರ್ಜರಿ ಕೊಡುಗೆ ನೀಡಿದ್ದು, 2026-27ನೇ ಶೈಕ್ಷಣಿಕ ಸಾಲಿನಿಂದ ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 200ಕ್ಕೆ ಹೆಚ್ಚಿಸಿ ಅನುಮೋದನೆ ನೀಡಿದೆ.
ಇದುವರೆಗೆ 150 ಎಂಬಿಬಿಎಸ್ ಸೀಟುಗಳಿಗೆ ಮಾತ್ರ ಪ್ರವೇಶಾವಕಾಶವಿದ್ದ ಕ್ರಿಮ್ಸ್ ಕಾಲೇಜಿನಲ್ಲಿ, ಇದೀಗ ಹೆಚ್ಚುವರಿಯಾಗಿ 50 ಸೀಟುಗಳು ಲಭ್ಯವಾಗಲಿವೆ. ಇದರಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಈ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವರ್ಷಕ್ಕೆ 200 ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ.
ಇದರೊಂದಿಗೆ, 2026-27ನೇ ಸಾಲಿನಿಂದ ನೂತನವಾಗಿ ‘ಆಲೈಡ್ ಹೆಲ್ತ್ ಸೈನ್ಸಸ್’ ಅಡಿಯಲ್ಲಿ ಪ್ರಮುಖ ಕೋರ್ಸ್ಗಳನ್ನು ಆರಂಭಿಸಲಾಗಿದೆ. ‘ಬಿ.ಎಸ್ಸಿ ಅನೆಸ್ಥೇಷಿಯಾ ಆಂಡ್ ಅಪರೇಷನ್ ಥಿಯೇಟರ್ ಟೆಕ್ನಾಲಜಿ’ ಹಾಗೂ ‘ಬಿ.ಎಸ್ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ’ ಕೋರ್ಸ್ಗಳಿಗೆ ತಲಾ 30 ಸೀಟುಗಳನ್ನು ಮಂಜೂರು ಮಾಡಲಾಗಿದ್ದು, ಈಗಾಗಲೇ 7 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ ಎಂದು ಕ್ರಿಮ್ಸ್ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
