ಜುಲೈ 27, 2026
ಸೋಮವಾರ

ನಮ್ಮನ್ನು ಅನುಸರಿಸಿ

Uttara-Kannada

ಜಿಲ್ಲಾ ವಿಜ್ಞಾನ ಕೇಂದ್ರ ಖಾಸಗಿ ಕಾರ್ಯಕ್ರಮಕ್ಕೆ ಬಳಕೆ?

Pakka News Web • 27 ಜುಲೈ 2026,

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಮತ್ತು ಶೈಕ್ಷಣಿಕ ಕಾರ್ಯಾಗಾರ, ವಿಜ್ಞಾನ ಪ್ರದರ್ಶನ ಹಾಗೂ ಆಕಾಶ ವೀಕ್ಷಣೆಯಂತಹ ಸಾರ್ವಜನಿಕ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಕಾರವಾರದ ಕೊಡಿಭಾಗದಲ್ಲಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರವು ಇದೀಗ ನಿಯಮಾವಳಿಗಳ ಬಳಕೆಯ ವಿಚಾರವಾಗಿ ಸ್ಥಳೀಯ ವಲಯದಲ್ಲಿ ಗಮನ ಸೆಳೆಯುತ್ತಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಚಾರ ಸಂಘ, ರಾಜ್ಯ ವಿಜ್ಞಾನ ಪರಿಷತ್ ಹಾಗೂ ಜಿಲ್ಲಾಡಳಿತ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಈ ಪ್ರಮುಖ ಶೈಕ್ಷಣಿಕ ಕೇಂದ್ರದ ಸಭಾಂಗಣದಲ್ಲಿ ಇತ್ತೀಚೆಗೆ ನಡೆದಿದೆ ಎನ್ನಲಾದ ಖಾಸಗಿ ಸಮಾರಂಭವೊಂದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ.

ಜುಲೈ 26ರಂದು ಕೇಂದ್ರದ ಅಧಿಕಾರಿಯೊಬ್ಬರ ಕುಟುಂಬದ ವೈಯಕ್ತಿಕ ಕಾರ್ಯಕ್ರಮವೊಂದು ಸಭಾಂಗಣದಲ್ಲಿ ನೆರವೇರಿದೆ ಎಂಬ ಸುದ್ದಿಗಳು ಹರಿಡಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅರೆ-ಸರ್ಕಾರಿ ಅಥವಾ ಸರ್ಕಾರಿ ಸಂಸ್ಥೆಗಳ ಆವರಣವನ್ನು ವೈಯಕ್ತಿಕ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಇರುವ ಅಧಿಕೃತ ನಿಯಮಾವಳಿಗಳು ಯಾವುವು ಎಂಬ ಪ್ರಶ್ನೆಗಳು ಮೂಡಿಬಂದಿವೆ.

ಸಾಮಾನ್ಯವಾಗಿ ಸರ್ಕಾರಿ ನಿಯಂತ್ರಣಕ್ಕೊಳಪಡುವ ಆಸ್ತಿ ಹಾಗೂ ಆವರಣಗಳನ್ನು ಯಾವುದೇ ಖಾಸಗಿ ಬಳಕೆಗೆ ನೀಡಬೇಕಾದರೆ ನಿರ್ದಿಷ್ಟ ಮಾರ್ಗದರ್ಶಕ ಸೂತ್ರಗಳು ಮತ್ತು ಪೂರ್ವಾನುಮತಿಯ ಅಗತ್ಯವಿರುತ್ತದೆ. ವಿಜ್ಞಾನ ಚಟುವಟಿಕೆಗಳಿಗಾಗಿಯೇ ಮೀಸಲಾಗಿರುವ ಇಂತಹ ಮೂಲಸೌಕರ್ಯಗಳನ್ನು ವೈಯಕ್ತಿಕ ಕಾರ್ಯಕ್ರಮಗಳಿಗೆ ಬಳಸಲು ಅವಕಾಶವಿದೆಯೇ, ಒಂದು ವೇಳೆ ಅವಕಾಶವಿದ್ದರೆ ಸಾರ್ವಜನಿಕರಿಗೂ ಅದೇ ರೀತಿಯ ಸೌಲಭ್ಯಗಳು ಲಭ್ಯವಾಗುತ್ತವೆಯೇ ಎನ್ನುವ ಕುರಿತು ಪಾರದರ್ಶಕ ಮಾಹಿತಿಯ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡದಂತೆ, ಸಂಸ್ಥೆಯ ನಿಯಮಾವಳಿಗಳು ಹಾಗೂ ಸಭಾಂಗಣ ಬಳಕೆಯ ಮಾನದಂಡಗಳ ಕುರಿತು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತವು ಸೂಕ್ತ ಸ್ಪಷ್ಟನೆ ನೀಡುವುದು ಆಡಳಿತಾತ್ಮಕ ಪಾರದರ್ಶಕತೆಯ ದೃಷ್ಟಿಯಿಂದ ಸೂಕ್ತವಾಗಿದೆ. ಜಿಲ್ಲಾ ವಿಜ್ಞಾನ ಕೇಂದ್ರ ಹುಟ್ಟು ಹಬ್ಬದ ಅಚರಣೆಗೆ ಬಳಕೆ ಮಾಡುವುದು ಸೂಕ್ತವೇ ಎನ್ನುವುದು ಸಂಬಂಧಪಟ್ಟ ಅಧಿಕಾರಿಯೇ ಉತ್ತರ ನೀಡಬೇಕಾಗಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250