ಜುಲೈ 28, 2026
ಮಂಗಳವಾರ

ನಮ್ಮನ್ನು ಅನುಸರಿಸಿ

Uttara-Kannada

ಸಮುದಾಯವನ್ನೇ ಕೆರಳಿಸಿದ ರೀಲ್ಸ್!

Pakka News Web • 27 ಜುಲೈ 2026,

ಭಾಷೆಗೆ ಅಣಕಿಸಿ ರೀಲ್ಸ್ ಮಾಡಿದ ಯುವತಿ, ಪೊಲೀಸರಿಗೆ ದೂರು ಕ್ರಮಕ್ಕೆ ಒತ್ತಾಯ

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ವೀಕ್ಷಕರನ್ನು ಗಳಿಸುವ ಆಸೆಯಿಂದ ಕ್ಷತ್ರಿಯ ಕೋಮಾರಪಂತ ಸಮಾಜದ ವಿಶಿಷ್ಟ ಆಡುಭಾಷೆಯನ್ನು ಅಣಕಿಸಿ ರೀಲ್ಸ್ ಮಾಡಿದ ಪ್ರಕರಣ ಅಂಕೋಲಾದಲ್ಲಿ ವಿವಾದಕ್ಕೆ ಕಾರಣವಾಗಿದೆ. ಇದರ ವಿರುದ್ಧ ಸಮಾಜದ ಮುಖಂಡರು ಮತ್ತು ಯುವಕರ ತಂಡ ಅಂಕೋಲಾ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ.

ಇತರ ಸಮುದಾಯಕ್ಕೆ ಸೇರಿದ ಯುವತಿಯೊಬ್ಬರು ಈ ರೀಲ್ಸ್ ರೂಪಿಸಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂಬುದು ದೂರುದಾರರ ಆರೋಪ. ಇದು ಸಮಾಜಬಾಂಧವರ ಮನಸ್ಸಿಗೆ ನೋವುಂಟುಮಾಡಿದ್ದಲ್ಲದೆ, ಈ ಬಗ್ಗೆ ಆಕ್ಷೇಪ ಎತ್ತಿದ ಯುವಕರಿಗೆ ಜಾಲತಾಣದಲ್ಲೇ ಅಸಭ್ಯ ಪದ ಬಳಸಿ ತಿರುಗೇಟು ನೀಡಲಾಗಿದೆ ಎಂಬ ಆರೋಪವೂ ದೂರಿನಲ್ಲಿದೆ. ಘಟನೆಯಿಂದ ಕೆರಳಿರುವ ಸಮಾಜದ ಮುಖಂಡರು, ಭಾಷೆ-ಸಂಸ್ಕೃತಿ-ಸಮುದಾಯದ ಘನತೆಗೆ ಧಕ್ಕೆ ತರುವಂತಹ ಜಾಲತಾಣ ದುರುಪಯೋಗವನ್ನು ಕಾನೂನು ಎಂದಿಗೂ ಸಹಿಸದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ತಡೆಯಲು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂಬುದು ಅವರ ಒತ್ತಾಯ.

ಸಂಜಯ ನಾಯ್ಕ ನೇತೃತ್ವದಲ್ಲಿ ಪೊಲೀಸ್ ಠಾಣೆಗೆ ತೆರಳಿದ ನಿಯೋಗದಲ್ಲಿ ವಿಜಯಕುಮಾರ ನಾಯ್ಕ, ಗಣಪತಿ ನಾಯ್ಕ, ಚಂದ್ರಕಾಂತ ನಾಯ್ಕ, ಮಾರುತಿ ನಾಯ್ಕ, ವಿನೋದ ನಾಯ್ಕ ಸೇರಿ ಸಮಾಜದ ಹಲವು ಹಿರಿಯರು, ಯುವಕರು ಪಾಲ್ಗೊಂಡಿದ್ದರು. ದೂರು ಸ್ವೀಕರಿಸಿದ ಪೊಲೀಸ್ ನಿರೀಕ್ಷಕ ಚಂದ್ರಶೇಖರ್ ಮಠಪತಿ, ಪ್ರಕರಣವನ್ನು ಕಾನೂನಿನ ಚೌಕಟ್ಟಿನೊಳಗೆ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜಯ ನಾಯ್ಕ, ಸಾಮಾಜಿಕ ಜಾಲತಾಣ ಅಭಿವ್ಯಕ್ತಿ ಸ್ವಾತಂತ್ರ್ಯದ ವೇದಿಕೆಯಾಗಿದ್ದರೂ ಅದನ್ನು ಸಮುದಾಯ, ಭಾಷೆ ಅಥವಾ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರುವಂತೆ ದುರುಪಯೋಗಪಡಿಸಿಕೊಂಡರೆ ಕಾನೂನು ಕ್ರಮ ಅನಿವಾರ್ಯ ಎಂದು ಸ್ಪಷ್ಟಪಡಿಸಿದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250