ಪಟ್ಟಣದ ಜಾಲಿ ರಸ್ತೆಯಲ್ಲಿರುವ ಜಟಕೇಶ್ವರ ಅಂಗಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಭಟ್ಕಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂಪನಕೇರಿಯ ನಿವಾಸಿ ಈಶ್ವರ ಸೋಮಯ್ಯ ಗೊಂಡ (29) ಬಂಧಿತ ಆರೋಪಿಯಾಗಿದ್ದಾನೆ. ಈತ ಕರ್ನಾಟಕ ರಾಜ್ಯದ ವಿವಿಧ ಮಾದರಿಯ ಮದ್ಯದ ಪ್ಯಾಕೆಟ್‌ಗಳು ಹಾಗೂ ಬಾಟಲಿಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಸುಳಿವು ಆಧರಿಸಿ ನಗರ ಠಾಣೆಯ ಪಿಎಸ್‌ಐ ನವೀನ್ ನಾಯ್ಕ ಅವರ ನೇತೃತ್ವದ ಪೊಲೀಸ್ ತಂಡವು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳದ ಮೇಲೆ ದಾಳಿ ನಡೆಸಿತು.
ದಾಳಿಯ ಸಮಯದಲ್ಲಿ ಆರೋಪಿಯ ವಶದಲ್ಲಿದ್ದ ವಿವಿಧ ಬ್ರ್ಯಾಂಡ್‌ಗಳ ಮದ್ಯದ ಪ್ಯಾಕೆಟ್‌ಗಳು ಮತ್ತು ಬಾಟಲಿಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು
3,685 ರೂ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆಯಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆ ನಡೆದಿದೆ.
ಅಕ್ರಮ ಮದ್ಯ ಮಾರಾಟ: ಓರ್ವ ಪೊಲೀಸ್ ವಶಕ್ಕೆ
