ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಶೋಕ ಸೂಚಿಸಲು ಹೋದ ಕುಟುಂಬದ ಮೇಲೆ ಹಲ್ಲೆ: ಇಬ್ಬರ ವಿರುದ್ಧ ದೂರು

Pakka News Web • 28 ಜುಲೈ 2026,

ಸಾವಿಗೆ ಮಾಟ-ಮಂತ್ರವೇ ಕಾರಣ ಎಂಬ ಆರೋಪದೊಂದಿಗೆ ಸಂತಾಪ ಸೂಚಿಸಲು ಹೋಗಿದ್ದ ಕುಟುಂಬವೊಂದರ ಮೇಲೆ ಹಲ್ಲೆ ನಡೆದ ಪ್ರಕರಣ ತಾಲೂಕಿನ ಬೆಳಕೆ ಗ್ರಾಮದಲ್ಲಿ ವರದಿಯಾಗಿದೆ. ಸ್ಟೀಲ್ ರಾಡ್‌ನಿಂದ ಹೊಡೆದು ಗಾಯಗೊಳಿಸಿದ್ದಲ್ಲದೆ ಜೀವ ಬೆದರಿಕೆಯನ್ನೂ ಒಡ್ಡಿದ ಆರೋಪ ಎದುರಿಸುತ್ತಿರುವ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಕೆಯ ಜ್ಯೋತಿ ಮಂಜುನಾಥ ನಾಯ್ಕ ಅವರ ದೂರಿನಂತೆ ಹೊನ್ನೆಮಡಿ ಗ್ರಾಮದ ದೇವಿದಾಸ ಮಾದೇವ ನಾಯ್ಕ್ (42) ಮತ್ತು ವೆಂಕಟೇಶ್ ಮಾದೇವ ನಾಯ್ಕ್ (37) ಅವರನ್ನು ಆರೋಪಿಗಳಾಗಿ ಪೊಲೀಸರು ಗುರುತಿಸಿದ್ದಾರೆ.

ದೂರಿನ ಪ್ರಕಾರ, ಈ ಇಬ್ಬರು ಆರೋಪಿಗಳ ತಂದೆ ನಾಲ್ಕು ದಿನಗಳ ಹಿಂದೆ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಜ್ಯೋತಿ ಅವರ ಪತಿ, ಅಕ್ಕ ಹಾಗೂ ಭಾವ ಶೋಕ ಸೂಚಿಸಲೆಂದು ಆ ಮನೆಗೆ ತೆರಳಿದ್ದರು. ಆದರೆ ಅಲ್ಲಿ ದೇವಿದಾಸ ನಾಯ್ಕ್, ಈ ಕುಟುಂಬದವರೇ ಮಾಟ-ಮಂತ್ರ ಮಾಡಿಸಿ ತಮ್ಮ ತಂದೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ, ಅವಾಚ್ಯವಾಗಿ ನಿಂದಿಸಿ ಮನೆಗೆ ಬರದಂತೆ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.

ಇದನ್ನು ಜ್ಯೋತಿ ಅವರ ಪತಿ ಪ್ರಶ್ನಿಸಿದಾಗ, ಎರಡನೇ ಆರೋಪಿ ವೆಂಕಟೇಶ್ ನಾಯ್ಕ್ ಕೈಮುಷ್ಟಿಯಿಂದ ಹಲ್ಲೆ ನಡೆಸಿ ತಳ್ಳಿದ್ದಾನೆ. ಬಳಿಕ ದೇವಿದಾಸ ನಾಯ್ಕ್ ತನ್ನ ಕಾರಿನೊಳಗಿಂದ ಸ್ಟೀಲ್ ರಾಡ್ ತೆಗೆದು ಜ್ಯೋತಿ ಅವರ ಪತಿಯ ತಲೆಯ ಎಡಭಾಗಕ್ಕೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಘರ್ಷಣೆ ತಡೆಯಲು ಮಧ್ಯಪ್ರವೇಶಿಸಿದ ಜ್ಯೋತಿ ಅವರ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಲ್ಲದೆ, ಇಡೀ ಕುಟುಂಬಕ್ಕೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗಿದ್ದು, ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250