ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಕಮಲಾಕರ್ ಭಟ್‌ಗೆ ಸದ್ಯ ಜೈಲೇ ಗತಿ!

Pakka News Web • 30 ಜುಲೈ 2026,

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ನಡೆದಿದ್ದ ಚರ್ಚಾಸ್ಪದ ವಸಂತ್ ನಾಯ್ಕ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಶಿರಸಿ ನ್ಯಾಯಾಲಯ ಆಘಾತ ನೀಡಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಶಿರಸಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಲಯವು, ಪ್ರಕರಣದ ಪ್ರಮುಖ ಆರೋಪಿಗಳಾದ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಆತನ ಪ್ರೇಯಸಿ ಎನ್ನಲಾದ ಸುಚಿತ್ರಾ ಸೇರಿದಂತೆ ಒಟ್ಟು ಏಳು ಜನರಿಗೆ ಜಾಮೀನು ನೀಡಲು  ನಿರಾಕರಿಸಿದೆ.

ಆರು ತಿಂಗಳಿನಿಂದ ಕಾರವಾರ ಜೈಲಿನಲ್ಲಿರುವ ಆರೋಪಿಗಳು

2026ರ ಫೆಬ್ರವರಿಯಲ್ಲಿ ಜರುಗಿದ್ದ ಈ ಭೀಕರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಒಂಬತ್ತು ಜನರನ್ನು ಆರೋಪಿಗಳೆಂದು ಗುರುತಿಸಿದ್ದರು. ಈ ಪೈಕಿ ಎಂಟು ಜನರನ್ನು ಬಂಧಿಸಲಾಗಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರಲ್ಲಿ ಒಬ್ಬನಿಗೆ ಈಗಾಗಲೇ ಜಾಮೀನು ದೊರೆತಿದ್ದರೆ, ಇನ್ನುಳಿದ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಸೇರಿದಂತೆ ಏಳು ಜನ ಆರೋಪಿಗಳು ಕಳೆದ ಆರು ತಿಂಗಳಿಂದ ಕಾರವಾರದ ಜಿಲ್ಲಾ ಕೇಂದ್ರದ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡು, ಗುರುವಾರ ಮಹತ್ವದ ತೀರ್ಪು ಹೊರಬಿದ್ದಿದೆ. ಸರ್ಕಾರಿ ಅಭಿಯೋಜಕ (ಪಿಪಿ) ರಾಜೇಶ್ ಮಳಗೀಕರ ಅವರು ಮಂಡಿಸಿದ ಸುದೀರ್ಘ ವಾದ ಹಾಗೂ ಪ್ರಕರಣದ ಸೂಕ್ಷ್ಮತೆಯನ್ನು ಆಲಿಸಿದ ನ್ಯಾಯಾಧೀಶೆ ಹೇಮಲತಾ ಹುಲ್ಲೂರು ಅವರು, ಆರೋಪಿಗಳಾದ ಕಮಲಾಕರ್ ಭಟ್, ಸುಚಿತ್ರಾ, ಲೋಕನಾಥ್, ಮಹಮ್ಮದ್ ಮೆಹಫೂಜ್, ಮಹಮ್ಮದ್ ಫೈಸಲ್, ಇರ್ಫಾನ್ ಹಾಗೂ ಆಕಾಶ್‌ಗೆ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಯಶಸ್ವಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ. ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಕೇವಲ ಹತ್ಯೆ ಪ್ರಕರಣ ಮಾತ್ರವಲ್ಲದೇ, ಲೈಂಗಿಕ ಕಿರುಕುಳದ ಆರೋಪವೂ ಇದ್ದು, ಆ ಪ್ರಕರಣದ ವಿಚಾರಣೆ ಕಾರವಾರ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸದ್ಯ ಹತ್ಯೆ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿರುವುದರಿಂದ ಆರೋಪಿಗಳ ಜೈಲು ವಾಸ ಮುಂದುವರಿಯಲಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250