ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಪರೀಕ್ಷಾ ಅಕ್ರಮಕ್ಕೆ ಬ್ರೇಕ್ ಹಾಕಲು AI ಹೈಟೆಕ್ ಕಣ್ಗಾವಲು

Pakka News Web • 31 ಜುಲೈ 2026,

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಗಸ್ಟ್ 2ರಂದು ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ತಡೆಯಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಮುಖ ಗುರುತಿಸುವಿಕೆ ತಂತ್ರಜ್ಞಾನ ಹಾಗೂ ಸಿಸಿಟಿವಿಗಳ ಹೈಟೆಕ್ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.

ಈ ಆಧುನಿಕ ತಂತ್ರಜ್ಞಾನದ ಮೂಲಕ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವುದು ಜಿಲ್ಲಾಡಳಿತದ ಪ್ರಮುಖ ಆದ್ಯತೆಯಾಗಿದೆ. ಕಾರವಾರ ಮತ್ತು ಅಂಕೋಲಾದ ಒಟ್ಟು 20 ಕೇಂದ್ರಗಳಲ್ಲಿ 6,475 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಪ್ರಾಧಿಕಾರದ ಪ್ರತಿಯೊಂದು ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಪರೀಕ್ಷಾ ಅಕ್ರಮ ತಡೆಯುವ ನಿಟ್ಟಿನಲ್ಲಿ ವೆಬ್ ಕ್ಯಾಸ್ಟಿಂಗ್ ವೀಕ್ಷಣೆ ಸೇರಿದಂತೆ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮೊಬೈಲ್, ಬ್ಲೂಟೂತ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ವೈಯಕ್ತಿಕ ವಸ್ತುಗಳನ್ನು ಕೇಂದ್ರದೊಳಗೆ ತರುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಭ್ಯರ್ಥಿಗಳಿಗೆ ಪೂರ್ಣ ತೋಳಿನ (ಫುಲ್ ಸ್ಲೀವ್ಸ್) ಉಡುಪು ಹಾಗೂ ಬೂಟು ಧರಿಸಲು ಅವಕಾಶವಿಲ್ಲದಿದ್ದು, ಚಪ್ಪಲಿ ಅಥವಾ ಸ್ಯಾಂಡಲ್ ಧರಿಸಿ ಬರಬೇಕಿದೆ. ಸುಗಮ ಸಂಚಾರ, ಕುಡಿಯುವ ನೀರು ಹಾಗೂ ವಿದ್ಯುತ್ ಲೋಪವಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದ್ದು, ಅಭ್ಯರ್ಥಿಗಳು ಸೂಕ್ತ ಗುರುತಿನ ಚೀಟಿಯೊಂದಿಗೆ ಪರೀಕ್ಷೆ ಆರಂಭಕ್ಕೂ 2 ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ತಲುಪಬೇಕಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250