ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಲಾರಿಯೊಂದು ರಸ್ತೆ ಬದಿಯಲ್ಲಿದ್ದ ಮೂರು ದನಗಳಿಗೆ ಭೀಕರವಾಗಿ ಡಿಕ್ಕಿ ಹೊಡೆದಿದ್ದು, ಮೂರು ಜಾನುವಾರು ಸ್ಥಳದಲ್ಲೇ ದಾರುಣವಾಗಿ ಕೊನೆಯುಸಿರೆಳೆದಿವೆ ಘಟನೆ ಕಾರವಾರದ ಹಬ್ಬುವಾಡದ ಸೋನಿ ಎಚ್.ಪಿ ಗ್ಯಾಸ್ ಏಜೆನ್ಸಿ ಬಳಿ ಸಂಭವಿಸಿದೆ. ಈ ಬಗ್ಗೆ ಕಾರವಾರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾರವಾರ ನಗರದಿಂದ ಹಬ್ಬುವಾಡ ಕಡೆಗೆ ತೆರಳುತ್ತಿದ್ದ ‘KA-25-D-3578’ ನೋಂದಣಿ ಸಂಖ್ಯೆಯ ಲಾರಿ ಚಾಲಕ, ಗದಗ ಜಿಲ್ಲೆ ಲಕ್ಕುಂಡಿಯ ವೆಂಕಟೇಶ ನೂಕಾಪುರ ಎಂಬಾತನೇ ಈ ಅನಾಹುತಕ್ಕೆ ಕಾರಣನಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹಬ್ಬುವಾಡದ ಶ್ಯಾಮ್ ಮೇತ್ರಿ ಎಂಬುವರು ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
