ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಅರಣ್ಯ ಇಲಾಖೆ ದಿಢೀರ್ ದಾಳಿ: 33 ಕೆ.ಜಿ ಶ್ರೀಗಂಧ ವಶ, ಓರ್ವ ಬಂಧನ

Pakka News Web • 4 ಆಗಸ್ಟ್ 2026,

ಶ್ರೀಗಂಧದ ತುಂಡುಗಳನ್ನು ಸಂಗ್ರಹಿಸಿ ಕೆತ್ತನೆ ಮಾಡಲಾಗುತ್ತಿದೆ ಎಂಬ ಖಚಿತ ಸುಳಿವು ಬೆನ್ನತ್ತಿದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, 33.390 ಕೆ.ಜಿ. ತೂಕದ ಶ್ರೀಗಂಧವನ್ನು ಜಪ್ತಿ ಮಾಡಿದ ಘಟನೆ ಶಿರಸಿ ತಾಲೂಕಿನ ಕಾನಗೋಡ ಗ್ರಾಮದ ಅರಣ್ಯ ವ್ಯಾಪ್ತಿಯಲ್ಲಿ ಸಂಭವಿಸಿದೆ.

ದಾಳಿಯ ವೇಳೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಓರ್ವ ಸಿಕ್ಕಿಬಿದ್ದಿದ್ದು, ಮತ್ತೋರ್ವ ಆರೋಪಿ ಸಿಬ್ಬಂದಿಯ ಕಣ್ಣುತಪ್ಪಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಸ್ಥಳದಲ್ಲೇ ಬಂಧಿತನಾದ ಆರೋಪಿಯನ್ನು ಕಾನಗೋಡ ಜನತಾ ಕಾಲೋನಿ ನಿವಾಸಿ ದಯಾನಂದ ನಾರಾಯಣ ನಾಯ್ಕ (48) ಎಂದು ಗುರುತಿಸಲಾಗಿದೆ. 

ಘಟನಾ ಸ್ಥಳದಿಂದ ಕಾಲ್ಕಿತ್ತ ಮಶಿಗದ್ದೆ ಗ್ರಾಮದ ಮಂಜುನಾಥ ಅಣ್ಣಪ್ಪ ದೇವಾಡಿಗ (47) ಎಂಬಾತನ ಬಂಧನಕ್ಕೆ ಅರಣ್ಯ ಪಡೆ ವ್ಯಾಪಕ ಶೋಧ ಕಾರ್ಯ ಕೈಗೊಂಡಿದೆ. ಜಪ್ತಿಯಾದ ಶ್ರೀಗಂಧದ ಮೌಲ್ಯಮಾಪನ ನಡೆಸಲಾಗುತ್ತಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಸೂರ್ಯವಂಶಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಿತ್‌ಕುಮಾರ್ ಚವ್ಹಾಣ ಅವರ ಮಾರ್ಗದರ್ಶನದಲ್ಲಿ, ವಲಯ ಅರಣ್ಯಾಧಿಕಾರಿ ಭವ್ಯಾ ನಾಯ್ಕ ಅವರ ಚಾಣಾಕ್ಷ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ನಾರ್ವೆಕರ, ಅರಣ್ಯ ವನಪಾಲಕರಾದ ರೋಹಿತ್ ಎಂ. ನಾಯ್ಕ, ಮಂಜುನಾಥ ಜಹಗೀರದಾರ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250