ಪರ್ತಗಾಳಿ: ದೇವರನ್ನು ಒಲಿಸಿಕೊಳ್ಳಲು ಸಂಪತ್ತಿಗಿಂತಲೂ ಶುದ್ಧ ಭಕ್ತಿಯೇ ಮುಖ್ಯ. ದೇವರು ಭಕ್ತನ ಭೌತಿಕ ಸಂಪತ್ತನ್ನು ನೋಡದೆ, ಆತನಲ್ಲಿರುವ ನಿಷ್ಕಲ್ಮಶ ಭಕ್ತಿಯನ್ನಷ್ಟೇ ಪರಿಗಣಿಸುತ್ತಾನೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಮದ್ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಹೇಳಿದರು.
ಇಲ್ಲಿನ ಮಠದಲ್ಲಿ ಆಯೋಜಿಸಲಾಗಿದ್ದ ಚಾತುರ್ಮಾಸ್ಯ-೨೦೨೬ ರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಕ್ತ ಸಂಕುಲಕ್ಕೆ ಆಶೀರ್ವಚನ ನೀಡಿದ ಶ್ರೀಗಳು, ಪೂರ್ವಜನ್ಮದ ಕರ್ಮಫಲವನ್ನು ಅನುಭವಿಸುತ್ತಿರುವ ನಾವು ಈ ಜನ್ಮದಲ್ಲಿ ನಿರಂತರ ಸತ್ಕರ್ಮ ಹಾಗೂ ದೇವಸೇವೆಯಲ್ಲಿ ತೊಡಗಿಸಿಕೊಂಡರೆ ದುಷ್ಕರ್ಮಗಳ ಫಲವು ಕ್ಷೀಣಿಸಿ, ಜೀವನ ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಮಾರ್ಗದರ್ಶನ ಮಾಡಿದರು.
ಇದೇ ದಿವ್ಯ ಸಮಾರಂಭದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ನೂತನ ಅಧಿಕೃತ ವೆಬ್‌ಸೈಟ್ ಅನ್ನು ಶ್ರೀಸ್ವಾಮೀಜಿಯವರು ಲೋಕಾರ್ಪಣೆಗೊಳಿಸಿದರು. ಮಠದಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ನಿತ್ಯ ಪಂಚಾಂಗ, ಅಪರೂಪದ ಗ್ರಂಥಗಳು, ಸೇವಾ ಬುಕ್ಕಿಂಗ್ ಮತ್ತು ಶ್ರೀಸ್ವಾಮೀಜಿಯವರ ಮೊಕ್ಕಾಂ ಸೇರಿದಂತೆ ಮಠದ ಸಮಗ್ರ ಮಾಹಿತಿಯನ್ನು ವಿಶ್ವದಾದ್ಯಂತ ಇರುವ ಶಿಷ್ಯವೃಂದಕ್ಕೆ ತಲುಪಿಸುವ ಉದ್ದೇಶದಿಂದ ಈ ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗಿದೆ. ಈ ಸಂದರ್ಭದಲ್ಲಿ ಆದರ್ಶಧಾಮ ಹಾಗೂ ಶ್ರೀರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ಉದಾರ ದೇಣಿಗೆ ನೀಡಿದ ಮೂಲತಃ ಅಂಕೋಲಾದ, ಪ್ರಸ್ತುತ ಮುಂಬೈನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಶಶಿಕಾಂತ ರಾಯಪ್ಪ ಶಾನಭಾಗ ಅವರನ್ನು ಶ್ರೀಗಳು ಆಶೀರ್ವದಿಸಿದರು.
ಆಗಸ್ಟ್ ೫ ರಿಂದ ಸೆಪ್ಟೆಂಬರ್ ೨೬ ರವರೆಗೆ ನಡೆಯಲಿರುವ ಚಾತುರ್ಮಾಸ್ಯದ ಅವಧಿಯಲ್ಲಿ ನಾಗಪಂಚಮಿ, ಋಗ್ ಉಪಾಕರ್ಮ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಅನಂತ ಚತುರ್ದಶಿ ಸೇರಿದಂತೆ ಹಲವು ಧಾರ್ಮಿಕ ಆಚರಣೆಗಳು ಜರುಗಲಿವೆ. ಜತೆಗೆ ಪ್ರತಿ ಏಕಾದಶಿಯಂದು ಶ್ರೀಗುರುಗಳಿಂದ ತಪ್ತಮುದ್ರಾ ಧಾರಣೆಯೂ ನೆರವೇರಲಿದೆ. ಇದರೊಂದಿಗೆ ಆರೋಗ್ಯ, ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರಗಳಂತಹ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳು ಹಾಗೂ ದೇಶದ ಖ್ಯಾತ ಭಜನಾ ಮಂಡಳಿಗಳಿಂದ ಭಜನಾ ಸೇವೆ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ನೇರಪ್ರಸಾರವನ್ನು ಮಠದ ಅಧಿಕೃತ ಜಾಲತಾಣ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗುವುದು ಎಂದು ಮಠದ ಸಾಮಾಜಿಕ ಮಾಧ್ಯಮ ವಿಭಾಗ ತಿಳಿಸಿದೆ.
ಕಾರ್ಯಕ್ರಮದಲ್ಲಿ ಜೀವೋತ್ತಮ ವಿದ್ಯಾಪೀಠದ ವಿದ್ಯಾರ್ಥಿಗಳು, ವೈದಿಕರು, ಕರ್ನಾಟಕ, ಗೋವಾ, ಕೇರಳ ಹಾಗೂ ಮಹಾರಾಷ್ಟ್ರದ ವಿವಿಧ ದೇವಾಲಯಗಳ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಜತೆಗೆ ಪರ್ತಗಾಳಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಅನಿಲ ಪೈ, ಮಾಜಿ ಉಪಮುಖ್ಯಮಂತ್ರಿ ದಿಗಂಬರ ಕಾಮತ, ಶ್ರೀ ಗೋಕರ್ಣ ಮಠ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಶ್ರೀನಿವಾಸ ದೆಂಪೊ, ಉಪಾಧ್ಯಕ್ಷ ಆರ್.ಆರ್. ಕಾಮತ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಪ್ರಮುಖ ಗಣ್ಯರು ಹಾಗೂ ದೇಶ-ವಿದೇಶಗಳಿಂದ ಆಗಮಿಸಿದ್ದ ಸಹಸ್ರಾರು ಶಿಷ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
