ಹೆತ್ತ ಕರುಳಿನ ಮಮಕಾರ, ತ್ಯಾಗ ಮತ್ತು ಪ್ರೀತಿಯ ಮುಂದೆ ಇಂದಿನ ಸ್ವಾರ್ಥಿ ಲೋಕದ ಕಠೋರತೆ ಎಷ್ಟಿದೆ ಎಂಬುದಕ್ಕೆ ಹರಿಯಾಣದ ಸೋನಿಪತ್‌ನಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ.
ಒಮ್ಮೆ ಮುಂಬಯಿನ ಯಶಸ್ವಿ ಜವಳಿ ಉದ್ಯಮಿಯಾಗಿದ್ದ ಶಿವಚರಣ್ ರಾಮ್ ರತನ್ ಗುಪ್ತಾ ಅವರಿಗೆ ಅನಿತಾ, ನಿಶಾ ಮತ್ತು ಪ್ರಿಯಾ ಎಂಬ ಮೂವರು ಹೆಣ್ಣುಮಕ್ಕಳು. ಕಣ್ಣು ಕೊಟ್ಟು ಕಾಯುವ ತಂದೆಯಂತೆ, ತಮ್ಮ ಇಡೀ ಜೀವನದ ಗಳಿಕೆ, ಶ್ರಮ ಮತ್ತು ಕನಸುಗಳನ್ನೆಲ್ಲಾ ಈ ಮೂವರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿಯೇ ಧಾರೆ ಎರೆದಿದ್ದರು.
ಮಕ್ಕಳು ಚೆನ್ನಾಗಿ ಓದಿ, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಆ ತಂದೆಯ ಹೆಮ್ಮೆ ಮುಗಿಲು ಮುಟ್ಟಿತ್ತು. ಕಾಲಕ್ರಮೇಣ ಮೂವರಿಗೂ ಅದ್ದೂರಿಯಾಗಿ ಮದುವೆಯಾಗಿ, ತಮ್ಮದೇ ಸುಖಿ ಸಂಸಾರಗಳಲ್ಲಿ ನೆಲೆಸಿದರು. ಅನಿತಾ ನೇಪಾಳದಲ್ಲಿ ಶಿಕ್ಷಕಿಯಾಗಿದ್ದರೆ, ನಿಶಾ ಉತ್ತರ ಪ್ರದೇಶದ ಅಜಂಗಢದಲ್ಲಿ ಮತ್ತು ಪ್ರಿಯಾ ಮುಂಬಯಿನಲ್ಲಿ ಅತ್ಯಂತ ಶ್ರೀಮಂತ, ಸುಖಕರ ಜೀವನ ನಡೆಸುತ್ತಿದ್ದರು.
ಆದರೆ, ವಿಧಿಯ ಆಟವೇ ಬೇರೆಯಾಗಿತ್ತು. ಪತ್ನಿ ಮೀನಾ ಅವರ ಅಗಲಿಕೆಯ ನಂತರ ಶಿವಚರಣ್ ಗುಪ್ತಾ ಅವರು ಮಾನಸಿಕವಾಗಿ ತೀರಾ ಕುಸಿದುಬಿದ್ದರು. ಹತ್ತು ಜನರಿದ್ದ ಮನೆಯಲ್ಲಿ ಇದ್ದಕ್ಕಿದ್ದಂತೆ ಒಂಟಿತನ ಆವರಿಸಿತು. ತಮ್ಮ ಇಡೀ ಜೀವನವನ್ನು ಯಾರಿಗಾಗಿ ಮುಡಿಪಾಗಿಟ್ಟಿದ್ದರೋ, ಅದೇ ಮಕ್ಕಳಿಗೆ ಈ ವೃದ್ಧ ತಂದೆಯನ್ನು ನೋಡಿಕೊಳ್ಳಲು ಸಮಯವಿರಲಿಲ್ಲ. ಕೊನೆಗೆ ವಿಧಿಯಿಲ್ಲದೇ ಶಿವಚರಣ್ ಅವರು ಹರಿಯಾಣದ ಸೋನಿಪತ್‌ನಲ್ಲಿರುವ ‘ಸಮಾಜ ಕಲ್ಯಾಣ ಶಿಕ್ಷಾ ಸಮಿತಿ’ಯ ವೃದ್ಧಾಶ್ರಮವನ್ನು ಸೇರಬೇಕಾಯಿತು.
ಕಳೆದ ಎರಡು ವರ್ಷಗಳಿಂದ ವೃದ್ಧಾಶ್ರಮದಲ್ಲಿದ್ದ ಶಿವಚರಣ್ ಅವರ ಬಳಿ ಒಂದು ಸಣ್ಣ ಫೋನ್ ಇತ್ತು. ಆ ಫೋನ್ ಮೂಲಕ ತಾವೇ ಆಗಾಗ ಹೆಣ್ಣುಮಕ್ಕಳಿಗೆ ಕರೆ ಮಾಡಿ ಕ್ಷೇಮ ವಿಚಾರಿಸುತ್ತಿದ್ದರು. ಆದರೆ, ವಯಸ್ಸಾಗಿ ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಂತೆ, ಮಕ್ಕಳ ಕಡೆಯಿಂದ ಬರುವ ಕರೆಗಳು ತೀರಾ ಕಡಿಮೆಯಾದವು. ‘ತಂದೆಗೆ ಹುಷಾರಿಲ್ಲ, ಒಮ್ಮೆ ಬಂದು ನೋಡಿ ಹೋಗಿ’ ಎಂದು ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ಅವರು 20 ದಿನಗಳ ಮುಂಚಿತವಾಗಿಯೇ ಮಕ್ಕಳಿಗೆ ವಿಷಯ ತಿಳಿಸಿದರೂ, ಯಾವೊಬ್ಬ ಮಗಳೂ ತಂದೆಯ ಮುಖ ನೋಡಲು ಬರಲಿಲ್ಲ!
ಕೊನೆಗೆ ಕಳೆದ ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ, ಹೆತ್ತ ಮಕ್ಕಳ ಹಾರೈಕೆಗಾಗಿ ಹಂಬಲಿಸುತ್ತಿದ್ದ ಆ ಹಿರಿಯ ಜೀವ ಕಣ್ಣುಮುಚ್ಚಿತು. ವೃದ್ಧಾಶ್ರಮದ ಸಿಬ್ಬಂದಿ ತಕ್ಷಣವೇ ಮೂವರೂ ಪುತ್ರಿಯರಿಗೂ ಕರೆ ಮಾಡಿ ತಂದೆಯ ನಿಧನದ ವಿಷಯ ಮುಟ್ಟಿಸಿದರು. ಆದರೆ, ಕನಿಷ್ಠ ಅಂತಿಮ ದರ್ಶನಕ್ಕಾದರೂ ಬರುವಂತೆ ಕೇಳಿಕೊಂಡಾಗ ಸಿಕ್ಕ ಉತ್ತರ ಕಲ್ಲಿಗಿಂತಲೂ ಕಠೋರವಾಗಿತ್ತು:
ನಮಗೆ ಬರಲು ಸಮಯವಿಲ್ಲ, ನಮಗೆ ತುಂಬಾ ಕೆಲಸಗಳಿವೆ. ನೀವೇ ಎಲ್ಲವನ್ನೂ ಮುಗಿಸಿಬಿಡಿ!
ಕನಿಷ್ಠ ತಂದೆಯ ಅಂತಿಮ ಸಂಸ್ಕಾರದಲ್ಲೂ ಭಾಗಿಯಾಗದ ಆ ಪುತ್ರಿಯರು, ವಿಡಿಯೊ ಕಾಲ್ ಮೂಲಕವೇ ಅಂತ್ಯಕ್ರಿಯೆಯನ್ನು ವೀಕ್ಷಿಸಲು ನಿರ್ಧರಿಸಿದರು. ಹಿರಿಯ ಮಗಳು ಅನಿತಾ, ಆನ್‌ಲೈನ್ ಮೂಲಕ 5,100 ರೂ. ಹಣ ಕಳುಹಿಸಿ ವಿಧಿವಿಧಾನಗಳನ್ನು ಸರಿಯಾಗಿ ಮಾಡಿ ಎಂದು ಹೇಳಿ ಕೈತೊಳೆದುಕೊಂಡರು. ಕೊನೆಗೆ ವೃದ್ಧಾಶ್ರಮದ ಸಿಬ್ಬಂದಿ ಮತ್ತು ಸ್ಥಳೀಯರೇ ಸೇರಿ ಆ ಪುಣ್ಯಾತ್ಮನ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.
ಇಷ್ಟಕ್ಕೇ ಆ ಕೃತಘ್ನತೆಯ ಕಥೆ ಮುಗಿಯಲಿಲ್ಲ. ಅಂತ್ಯಕ್ರಿಯೆಯ ವಿಧಿವಿಧಾನಗಳು ನಡೆಯುತ್ತಿದ್ದಾಗ ವಿಡಿಯೊ ಕಾಲ್‌ನಲ್ಲಿದ್ದ ಮಗಳೊಬ್ಬಳು, ಇನ್ನು ಎಷ್ಟು ಹೊತ್ತಾಗುತ್ತದೆ? ನಾವು ಸ್ನಾನ ಮಾಡಿ ಊಟ ಮಾಡಬೇಕು ಎಂದು ತರಾತುರಿ ವ್ಯಕ್ತಪಡಿಸಿದಾಗ ಅಲ್ಲಿದ್ದವರ ಕಣ್ಣುಗಳಲ್ಲಿ ನೀರು ಜಾರಿತು. ಅಷ್ಟು ಮಾತ್ರವಲ್ಲ, ಅಸ್ಥಿ ವಿಸರ್ಜನೆಗೂ ನಾವು ಬರಲಾಗುವುದಿಲ್ಲ, ನೀವೇ ಗಂಗಾನದಿಯಲ್ಲಿ ವಿಸರ್ಜಿಸಿಬಿಡಿ ಎಂದು ಪೋನ್ ಇಟ್ಟುಬಿಟ್ಟರು.
ಜೀವನದ ಕೊನೆಯ ಕ್ಷಣದಲ್ಲೂ ಅನ್ಯರಿಗೆ ಬೆಳಕಾಗಬೇಕೆಂದು ತಮ್ಮ ಕಣ್ಣುಗಳನ್ನು ದಾನ ಮಾಡಿದ ಆ ಮಹಾನ್ ತಂದೆಯ ಆತ್ಮಕ್ಕೆ, ಹೆತ್ತ ಕರುಳೇ ತೋರಿದ ಈ ಅಮಾನವೀಯ ವರ್ತನೆ ತೀವ್ರ ಆಘಾತ ತಂದೊಡ್ಡಿದೆ. ಮನುಷ್ಯತ್ವ, ಸಂಬಂಧ ಮತ್ತು ಅಂತಃಕರಣ ಸಂಪೂರ್ಣವಾಗಿ ಬರಿದಾಗಿದೆಯೇ ಎಂದು ಇಡೀ ಸಮಾಜ ತಲೆತಗ್ಗಿಸುವಂತೆ ಈ ಘಟನೆ ಮಾಡಿದೆ.
