ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಜಾತ್ರೆಯಲ್ಲಿ ಸರಗಳ್ಳತನ: ಮೂವರು ಅಂದರ್!

Pakka News Web • 10 ಆಗಸ್ಟ್ 2026,

ಮುರ್ಕವಾಡಾ ಶ್ರೀ ಗ್ರಾಮದೇವಿ ಜಾತ್ರೆಯಲ್ಲಿ ಮಹಿಳೆಯೊಬ್ಬರ ಕೊರಳಿನಿಂದ ಚಿನ್ನದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಮ್ಮನಕೊಪ್ಪ ಗ್ರಾಮದ ಅಕ್ಷತಾ ಮಂಜುನಾಥ ಕುಂಬಾರ (30) ಎಂಬುವವರು ಕಳೆದ ಫೆಬ್ರುವರಿ 9ರಂದು ಪತಿ ಹಾಗೂ ಮಗಳೊಂದಿಗೆ ಮುರ್ಕವಾಡ ಜಾತ್ರೆಗೆ ತೆರಳಿದ್ದರು. ಜಾತ್ರೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ, ಬೀದಿ ದೀಪದ ಕಂಬದ ಬಳಿ ಬಂದ ಅಪರಿಚಿತ ಕಳ್ಳನೊಬ್ಬ ಅವರ ಕೊರಳಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಮಂಗಳಸೂತ್ರವನ್ನು ಒಮ್ಮೆಲೇ ಕಿತ್ತುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದ. ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ತಾಂತ್ರಿಕ ಮಾಹಿತಿ ಹಾಗೂ ಖಚಿತ ಸುಳಿವಿನ ಆಧಾರದ ಮೇಲೆ ಆಗಸ್ಟ್ 8ರಂದು ಸಕಾಲಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಾವಲವಾಡ ಹಾಗೂ ಹೊಸ ಹಡಗಲಿ ಗ್ರಾಮಗಳಲ್ಲಿ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದರು.

ಬಂಧಿತರನ್ನು ಹೊಸ ಹಡಗಲಿಯ ಶಶಿಧರ ಉಳವಪ್ಪ ಬಾರ್ಕಿ, ಕೆ.ಕೆ. ಹಳ್ಳಿಯ ಕಿರಣ ಧರ್ಮರಾಜ್ ಗೋಡಿಮನಿ ಹಾಗೂ ಹಳಿಯಾಳ ಮಡ್ಡಿಯ ವಾಸಿಮ್ ಶಿರಾಜುದ್ದೀನ್ ಚವಾಣ್ ಎಂದು ಗುರುತಿಸಲಾಗಿದೆ. ತೀವ್ರ ವಿಚಾರಣೆಯ ವೇಳೆಯಲ್ಲಿ ಆರೋಪಿಗಳು ಜಾತ್ರೆಯಲ್ಲಿ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಬಂಧಿತರಿಂದ 4.50 ಲಕ್ಷ ಮೌಲ್ಯದ 30 ಗ್ರಾಂ ಚಿನ್ನದ ಮಂಗಳಸೂತ್ರ ಹಾಗೂ ಕೃತ್ಯಕ್ಕೆ ಬಳಸಿದ್ದ ₹50 ಸಾವಿರ ಮೌಲ್ಯದ ಪ್ಯಾಶನ್ ಪ್ರೊ ಬೈಕ್ ಸೇರಿ ಒಟ್ಟು 5 ಲಕ್ಷ ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250