ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಡೆಗೂ ಅಧಿಕೃತ ವೇಗ ದೊರೆತಿದೆ.
ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾದ 163 ಕಿ.ಮೀ. ಉದ್ದದ ಹುಬ್ಬಳ್ಳಿ-ಅಂಕೋಲಾ ನೂತನ ಬ್ರಾಡ್‌ಗೇಜ್ ದ್ವಿಪಥ ವಿದ್ಯುದ್ದೀಕರಣ ರೈಲು ಯೋಜನೆಯನ್ನು ಕೇಂದ್ರ ಸರ್ಕಾರವು ‘ವಿಶೇಷ ರೈಲ್ವೆ ಯೋಜನೆ’ ಎಂದು ಅಧಿಕೃತವಾಗಿ ಪ್ರಕಟಿಸಿದೆ.
ಈ ಕುರಿತು ನೈಋತ್ಯ ರೈಲ್ವೆಯ ಮುಖ್ಯ ಎಂಜಿನಿಯರ್ ಕಚೇರಿಯು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ರವಾನಿಸಿದೆ.
ಸರ್ಕಾರಿ, ಖಾಸಗಿ ಹಾಗೂ ಅರಣ್ಯ ಭೂಮಿಯನ್ನು ಒಳಗೊಂಡಿರುವ ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ರೈಲ್ವೆ ಕಾಯ್ದೆ 2008ರ ನಿಬಂಧನೆಗಳ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಅಂಕೋಲಾ-ಕುಮಟಾದ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ರೈಲ್ವೆ ಕಾಯ್ದೆ 1989ರ ಪ್ರಕಾರ ಈ ಯೋಜನೆಯ ಅಧಿಕೃತ ‘ಭೂಸ್ವಾಧೀನಾಧಿಕಾರಿ’ಯಾಗಿ ನಾಮನಿರ್ದೇಶನ ಮಾಡಲು ಕೋರಲಾಗಿದೆ.
ಜೊತೆಗೆ ಭೂಸ್ವಾಧೀನಕ್ಕೆ ಸಂಬಂಧಿಸಿದ ಕುಂದುಕೊರತೆಗಳು ಹಾಗೂ ಪರಿಹಾರದ ತಂಟೆಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಮಧ್ಯಸ್ಥಗಾರರನ್ನಾಗಿ ನೇಮಿಸಲು ವಿನಂತಿಸಲಾಗಿದೆ.
ಕೇಂದ್ರ ಸರ್ಕಾರದ ಗೇಜೆಟ್ ಅಧಿಸೂಚನೆಯಲ್ಲಿ ಈ ಯೋಜನೆಗೆ ‘ವಿಶೇಷ ಯೋಜನೆ’ಯ ಸ್ಥಾನಮಾನ ನೀಡಿ ಅಧಿಕೃತವಾಗಿ ಪ್ರಕಟಿಸಲಾಗಿದ್ದು, ರೈಲ್ವೆ ಮಂಡಳಿಯಿಂದಲೂ ಸೂಕ್ತ ಅನುಮೋದನೆ ದೊರೆತಿದೆ. ಈ ಮಹತ್ವದ ನಿರ್ಧಾರದಿಂದಾಗಿ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಭಾಗದ ಜನರ ಕನಸಿನ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆಗಳು ಈಗ ತೀವ್ರಗೊಳ್ಳಲಿವೆ.
