ಕಾರವಾರ ನಗರದ ಆರ್.ಟಿ.ಒ. ಕಚೇರಿಯ ಮುಂಭಾಗದ ಕಡಲತೀರದ ಹನುಮಾನ್ ಮೂರ್ತಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ತೂರಾಡುತ್ತಿದ್ದ ಇಬ್ಬರು ಯುವಕರನ್ನು ಕಾರವಾರ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಣಗಾದ ಮಾಳಸಾರೋಡ್ (ಹಾಲಿ ಹಬ್ಬುವಾಡ) ನಿವಾಸಿ, ವೇಲ್ಡರ್ ವೃತ್ತಿಯ ಮಹಮ್ಮದ್ ಜಾಫರ್ ಗುಡಿಮಿಯಾ ಶೇಖ್ (33) ಹಾಗೂ ಬಾಡ ಸೋನಾರವಾಡದ ಕೂಲಿ ಕಾರ್ಮಿಕ ಮಿಥುನ್ ಅಣ್ಣಪ್ಪ ಕುಂಬಾರ (26) ಬಂಧಿತ ಆರೋಪಿಗಳು.
ಬೀಚ್ ಬಳಿ ಗಾಂಜಾ ಮಾದಕ ವಸ್ತುವನ್ನು ಸೇವಿಸಿ ಅಮಲಿನಲ್ಲಿ ಇದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ತನಿಖಾ ಪೊಲೀಸ್ ಉಪನಿರೀಕ್ಷಕ ಬಾಬು ಸೋಮು ಅಗೇರ ಅವರ ಸೂಚನೆಯಂತೆ ಇಬ್ಬರನ್ನೂ ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವೈದ್ಯಕೀಯ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದು (THC – Positive) ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ NDPS ಕಾಯ್ದೆಯ ಕಲಂ 27(b) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.
