ಕಾರವಾರ:ಸಾಕುಪ್ರಾಣಿಗಳ ಬೇಜವಾಬ್ದಾರಿ ರಸ್ತೆ ಸಂಚಾರ ಮತ್ತು ಬೀದಿ ದನಗಳ ಹಾವಳಿಯು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಅಮಾಯಕರೊಬ್ಬರ ಜೀವವನ್ನೇ ಬಲಿ ಪಡೆದಿದ ಘಟನೆ ಮಲ್ಲಾಪುರದಲ್ಲಿ ನಡೆದಿದೆ.
ರಸ್ತೆಯಲ್ಲಿ ಏಕಾಏಕಿ ಎರಗಿ ಬಂದ ಹೋರಿಗಳ ನಡುವಿನ ಕಾಳಗಕ್ಕೆ ಸಿಲುಕಿ ಬಲವಾದ ಪೆಟ್ಟು ತಿಂದಿದ್ದ ಯುವತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ದುಃಖದ ಘಟನೆ ಸಂಭವಿಸಿದೆ. ಮಲ್ಲಾಪುರ ನಿವಾಸಿ ರಾಜೇಶ್ವರಿ (29) ಮೃತಪಟ್ಟ ದುರ್ದೈವಿ.
ಮಲ್ಲಾಪುರ ಗ್ರಾಮದ ಸುಭದ್ರಾ ಹೋಟೆಲ್ ಸಮೀಪ ಈ ದುರಂತ ನಡೆದಿದೆ. ತಮ್ಮ ದಿನನಿತ್ಯದ ಕೆಲಸ-ಕಾರ್ಯಗಳನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ರಾಜೇಶ್ವರಿ ಅವರಿಗೆ ರಸ್ತೆಯಲ್ಲಿ ಕಾದಾಡುತ್ತಿದ್ದ ಹೋರಿಗಳು ಅನಿರೀಕ್ಷಿತವಾಗಿ ಅಪ್ಪಳಿಸಿವೆ. ಭೀಕರವಾಗಿ ಗುದ್ದಾಡಿಕೊಳ್ಳುತ್ತಾ ಓಡಿಬಂದ ಎರಡು ಹೋರಿಗಳು ಅತಿಯಾದ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ, ರಾಜೇಶ್ವರಿ ಅವರು ರಸ್ತೆಯಲ್ಲೇ ಆಯತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ಹೋರಿಗಳ ಏಟಿಗೆ ತೀವ್ರ ರಕ್ತಸ್ರಾವವಾಗಿ ನರಳುತ್ತಿದ್ದ ಅವರನ್ನು ಕಂಡ ತಕ್ಷಣವೇ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಮೂಲಕ ಪ್ರಾಣ ಉಳಿಸಲು ಹರಸಾಹಸ ಪಟ್ಟರು. ಆದರೆ, ಏಟು ತೀವ್ರ ಸ್ವರೂಪದ್ದಾಗಿದ್ದರಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅವರು ಕೊನೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣ ಬಿಟ್ಟಿದ್ದಾರೆ.
ಈ ಘಟನೆಯಿಂದ ಗ್ರಾಮದಲ್ಲಿ ಶೋಕಸಾಗರ ಆವರಿಸಿದ್ದು, ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
