ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಉದ್ಯಮಿಗಳಿಗೆ ಗುಡ್ ನ್ಯೂಸ್! ಎಂಎಸ್‌ಎಂಇ ಕಾಯ್ದೆಗೆ ತಿದ್ದುಪಡಿ

Pakka News Web • 14 ಆಗಸ್ಟ್ 2026,

ಕಾರವಾರ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳ (MSME) ಸಮಗ್ರ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಸುಗಮಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ‘ಎಂಎಸ್‌ಎಂಇಡಿ’ (MSMED) ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದಿದೆ. 

ನೂತನ ನಿಯಮಾವಳಿಗಳ ಪ್ರಕಾರ, ‘ಪ್ಲಾಂಟ್ ಮತ್ತು ಯಂತ್ರೋಪಕರಣಗಳಲ್ಲಿನ ಹೂಡಿಕೆ’ ಹಾಗೂ ‘ವಾರ್ಷಿಕ ವಹಿವಾಟು’ (ಟರ್ನೋವರ್) ಎಂಬ ಅವಳಿ ಮಾನದಂಡಗಳ ಆಧಾರದ ಮೇಲೆ ಉದ್ದಿಮೆಗಳನ್ನು ವರ್ಗೀಕರಿಸಲಾಗಿದೆ. ಇದೇ ವೇಳೆ ‘ಉದ್ಯಮ್ ನೋಂದಣಿ ಪೋರ್ಟಲ್’ ಅನ್ನು ಎಂಎಸ್‌ಎಂಇಗಳ ಅಧಿಕೃತ, ಸಂಪೂರ್ಣ ಉಚಿತ ಮತ್ತು ಸ್ವಯಂಪ್ರೇರಿತ ಡಿಜಿಟಲ್ ನೋಂದಣಿ ವೇದಿಕೆಯಾಗಿ ಕಾಯ್ದೆಯಲ್ಲಿ ಶಾಶ್ವತಗೊಳಿಸಲಾಗಿದೆ.

ಪಾವತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಎಲ್ಲಾ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಎಂಎಸ್‌ಎಂಇಗಳಿಂದ ಸರಕು ಮತ್ತು ಸೇವೆಗಳನ್ನು ಪಡೆದಾಗ ‘ಟಿಆರ್‌ಡಿಎಸ್’ (TReDS) ವೇದಿಕೆಯ ಮೂಲಕವೇ ಇನ್‌ವಾಯ್ಸ್‌ಗಳನ್ನು ಇತ್ಯರ್ಥಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ ಸರ್ಕಾರಗಳೂ ಸಹ ತಮ್ಮ ಸಾರ್ವಜನಿಕ ವಲಯದ ಉದ್ಯಮಗಳಿಗೆ ಇದೇ ನಿಯಮವನ್ನು ಅನ್ವಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಉದ್ಯಮಿಗಳಿಗೆ ಬರಬೇಕಾದ ಬಾಕಿ ಪಾವತಿ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ರಾಜ್ಯ ಸರ್ಕಾರಗಳು ಅಗತ್ಯಕ್ಕೆ ತಕ್ಕಂತೆ ಬಹು ‘ಎಂಎಸ್‌ಇ ಸೌಲಭ್ಯ ಮಂಡಳಿ’ಗಳನ್ನು (MSEFC) ಸ್ಥಾಪಿಸಲು ನಿಯಮಗಳನ್ನು ಸರಳೀಕರಿಸಲಾಗಿದೆ. ಜೊತೆಗೆ ವಿವಾದಗಳ ಶೀಘ್ರ ಇತ್ಯರ್ಥಕ್ಕಾಗಿ ಈ ಮಂಡಳಿಗಳಿಗೆ ಕಠಿಣ ಕಾಲಮಿತಿಯನ್ನೂ ನಿಗದಿಪಡಿಸಲಾಗಿದೆ.

ಮಧ್ಯಸ್ಥಿಕೆ ತೀರ್ಪಿನ ಅನ್ವಯ ಬಾಕಿ ಮೊತ್ತವನ್ನು ‘ಭೂ ಕಂದಾಯದ ಬಾಕಿ’ ಎಂದು ಪರಿಗಣಿಸಿ ವಸೂಲಿ ಮಾಡಲು ಅವಕಾಶ ನೀಡಲಾಗಿದ್ದು, ಇದರಿಂದ ಪಾವತಿ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳ್ಳಲಿದೆ. 

ಒಂದು ವೇಳೆ ಪ್ರಕರಣದ ಮೇಲ್ಮನವಿ ನ್ಯಾಯಾಲಯದಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ಬಾಕಿ ಉಳಿದಿದ್ದರೆ, ಪೂರೈಕೆದಾರರಿಗೆ ಬರಬೇಕಾದ ಮೊತ್ತದ ಕನಿಷ್ಠ ಶೇ.50 ರಷ್ಟನ್ನು ತಕ್ಷಣ ಪಾವತಿಸಲು ಆದೇಶಿಸುವ ಅಧಿಕಾರವನ್ನು ನ್ಯಾಯಾಲಯಗಳಿಗೆ ನೀಡಲಾಗಿದೆ. ಇದಲ್ಲದೆ, ಅಪರಾಧ-ಆಧಾರಿತ ಕಠಿಣ ದಂಡಗಳ ಬದಲಿಗೆ ಶ್ರೇಣೀಕೃತ ನಾಗರಿಕ ದಂಡಗಳನ್ನು ಜಾರಿಗೆ ತರಲಾಗಿದ್ದು, ಮೊದಲ ಬಾರಿಯ ಲೋಪಗಳಿಗೆ ಕೇವಲ ಎಚ್ಚರಿಕೆ ನೀಡಿ ವ್ಯವಹಾರ ಸ್ನೇಹಿ ವಾತಾವರಣ ನಿರ್ಮಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250