ಜೋಯಿಡಾ: ಪತ್ನಿಯನ್ನು ಕರೆದುಕೊಂಡು ಬರಲು ಕಾರಿನಲ್ಲಿ ತೆರಳುತ್ತಿದ್ದ ಕೆಪಿಸಿ ಉದ್ಯೋಗಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಜೋಯಿಡಾ ತಾಲೂಕಿನ ಉಸೋಡಾ ಬಳಿ ನಡೆದಿದೆ. ಗಣೇಶಗುಡಿಯಿಂದ ದಾಂಡೇಲಿ ಕಡೆಗೆ ಬರುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿಬಿದ್ದಿದೆ.
ಅಪಘಾತದಲ್ಲಿ 40 ವರ್ಷದ ಮಲ್ಲಿಕಾರ್ಜುನ ರಾವ್ ಮೃತಪಟ್ಟಿದ್ದಾರೆ. ಗಣೇಶಗುಡಿಯಿಂದ ದಾಂಡೇಲಿಗೆ ಬರುತ್ತಿದ್ದ ಸಂದರ್ಭದಲ್ಲಿ ಉಸೋಡಾ ಬಳಿ ಕಾರು ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಉರುಳಿದೆ ಎನ್ನಲಾಗಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆಪಿಸಿ ಸಿಬ್ಬಂದಿ, ಗಂಭೀರ ಸ್ಥಿತಿಯಲ್ಲಿದ್ದ ಮಲ್ಲಿಕಾರ್ಜುನ ರಾವ್ ಅವರನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಆದರೆ, ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದನ್ನು ದೃಢಪಡಿಸಿದರು.
ಮಲ್ಲಿಕಾರ್ಜುನ ರಾವ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕೆಪಿಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ವಕೀಲರು, ಅವೇಡಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅರುಣ್ ಭಗವತಿರಾಜ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಗಣೇಶಗುಡಿ ಹಾಗೂ ದಾಂಡೇಲಿ ಭಾಗದ ಸಾರ್ವಜನಿಕರು ಆಸ್ಪತ್ರೆಗೆ ಆಗಮಿಸಿದರು. ಸಹೋದ್ಯೋಗಿ ಹಾಗೂ ಸಾರ್ವಜನಿಕರ ವಲಯದಲ್ಲಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತವಾಗಿದೆ.
