ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಅಕ್ರಮ ಬೋಟಿಂಗ್ ದೂರು; ಮಹಿಳೆಗೆ ಜೀವ ಬೆದರಿಕೆ!

Pakka News Web • 19 ಆಗಸ್ಟ್ 2026,

ಶರಾವತಿ ನದಿಯಲ್ಲಿ ಮಳೆಗಾಲದ ನಿಷೇಧದ ನಡುವೆಯೂ ಅಕ್ರಮವಾಗಿ ಬೋಟಿಂಗ್ ನಡೆಸುತ್ತಿರುವ ಕುರಿತು ದೂರು ನೀಡಿದ್ದಕ್ಕೆ ಮಹಿಳೆಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದ್ದು, ನಾಲ್ವರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾವಿನಕುರ್ವಾ ಮಠದಕೇರಿಯ ಚಂದ್ರಕಲಾ ತಿಮ್ಮಪ್ಪ ಗೌಡ ದೂರು ನೀಡಿದ್ದು, ಅದೇ ಗ್ರಾಮದ ಹನುಮಂತ ಕೆರಿಯಾ ಗೌಡ, ಚಂದ್ರಹಾಸ ಧರ್ಮಾ ಗೌಡ, ಗಣೇಶ ಕೇಶ ಗೌಡ ಹಾಗೂ ಮೋಹನ ತಿಮ್ಮಪ್ಪ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿತರು ತಾರಿಬಾಗಿಲು ಬಳಿ ಶರಾವತಿ ನದಿಯಲ್ಲಿ ಬೋಟಿಂಗ್ ನಡೆಸುತ್ತಿದ್ದರು ಎನ್ನಲಾಗಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೋಟಿಂಗ್‌ಗೆ ನಿಷೇಧ ಹೇರಿದ್ದರೂ ಮಠದಕೇರಿಯ ಖಾಸಗಿ ತೋಟದ ಜಾಗದಿಂದ ಬೋಟಿಂಗ್ ಮುಂದುವರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಚಂದ್ರಕಲಾ ಅವರು ಪೊಲೀಸರು ಹಾಗೂ ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದಾರೆಂದು ಶಂಕಿಸಿ ಆ.16ರಂದು ಅವರ ಮನೆಯ ಬಳಿ ಆರೋಪಿತರು ಜಗಳವಾಡಿದ್ದರು ಎನ್ನಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಚಂದ್ರಕಲಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ಆಕ್ರೋಶಗೊಂಡ ಆರೋಪಿತರು ಆ.18ರಂದು ಬೆಳಿಗ್ಗೆ ಮನೆಯ ಹಿಂಭಾಗದ ಕಾಲುದಾರಿಯಲ್ಲಿ ತೆರಳುತ್ತಿದ್ದ ಅವರನ್ನು ಅಡ್ಡಗಟ್ಟಿ ನಿಂದಿಸಿ, ಮತ್ತೆ ದೂರು ನೀಡಿದರೆ ಕೊಂದು ಶರಾವತಿ ನದಿಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಚಂದ್ರಕಲಾ ಅವರ ದೂರಿನ ಆಧಾರದ ಮೇಲೆ ಹೊನ್ನಾವರ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250