ಕಾರವಾರ ನಗರಸಭೆ ಕಚೇರಿಗೆ ಗುರುವಾರ ಲೋಕಾಯುಕ್ತ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿದ್ದು, ಕಚೇರಿಯ ವಿವಿಧ ವಿಭಾಗಗಳ ಕಡತಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿರುವುದು ಗಮನ ಸೆಳೆದಿದೆ.
ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕಳೆದ ಕೆಲವು ದಿನಗಳಿಂದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸುಮಾರು 15 ಮಂದಿ ಅಧಿಕಾರಿಗಳಿದ್ದ ತಂಡ ಬೆಳಗ್ಗೆ 11ರ ಸುಮಾರಿಗೆ ನಗರಸಭೆ ಕಚೇರಿಗೆ ಆಗಮಿಸಿತು. ಬಳಿಕ ಪ್ರತ್ಯೇಕ ವಿಭಾಗಗಳಿಗೆ ತೆರಳಿದ ಅಧಿಕಾರಿಗಳು ಕಡತಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ಸಿಬ್ಬಂದಿಯಿಂದ ಪಡೆದುಕೊಂಡರು.
ನಗರಸಭೆ ಆಯುಕ್ತ ಜಗದೀಶ ಹುಲಿಗೆಜ್ಜೆ ಅವರ ಕೊಠಡಿಗೂ ತೆರಳಿದ ಅಧಿಕಾರಿಗಳು ಕೆಲಕಾಲ ಮಾಹಿತಿ ಸಂಗ್ರಹಿಸಿದರು ಎನ್ನಲಾಗಿದೆ. ಕಚೇರಿಯಲ್ಲಿನ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ಭೇಟಿ, ತಪಾಸಣೆ ಹಾಗೂ ದಾಖಲೆಗಳ ಪರಿಶೀಲನೆ ನಡೆಯುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಇದೇ ಹಿನ್ನೆಲೆಯಲ್ಲಿ ಕಾರವಾರ ನಗರಸಭೆಯಲ್ಲಿನ ಲೋಕಾಯುಕ್ತ ಅಧಿಕಾರಿಗಳ ತಪಾಸಣೆಯೂ ಕುತೂಹಲ ಮೂಡಿಸಿದೆ.
ಆದರೆ ನಗರಸಭೆಯಲ್ಲಿ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗುತ್ತಿದೆ ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳು ಈವರೆಗೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಪರಿಶೀಲನೆ ಪೂರ್ಣಗೊಂಡ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.
