ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಹೆಬ್ಬುಳ–ಸುಂಕಸಾಳ ಸಮೀಪ ನಡೆದಿದೆ.
ಮೃತರನ್ನು ದಾಂಡೇಲಿ ಮೂಲದ ಸಂಜಯ್ ಬೋಸ್ಲೆ (27) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿದ್ದ ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಅವರ ಗುರುತು ಹಾಗೂ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಗಾಯಾಳುವನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಾಥಮಿಕ ಮಾಹಿತಿಯಂತೆ ಇಬ್ಬರು ಬೈಕ್‌ನಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಸುಂಕಸಾಳ ಸಮೀಪ ಹೆದ್ದಾರಿಯಲ್ಲಿ ಬೈಕ್ ಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿಗೆ ಡಿಕ್ಕಿಯಾಗಿದೆ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದೆ. ಅಪಘಾತದ ತೀವ್ರತೆಗೆ ಸಂಜಯ್ ಬೋಸ್ಲೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುವಿನ ನೆರವಿಗೆ ಮುಂದಾದರು. ಕೆಲಕಾಲ ಹೆದ್ದಾರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪ್ರವಾಸಕ್ಕೆ ತೆರಳಿದ್ದ ಯುವಕ ದುರಂತದಲ್ಲಿ ಜೀವ ಕಳೆದುಕೊಂಡಿರುವುದು ಕುಟುಂಬಸ್ಥರು ಹಾಗೂ ಪರಿಚಿತರಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ.
ಮಾಹಿತಿ ಪಡೆದ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೀಡಾದ ವಾಹನಗಳನ್ನು ವಶಕ್ಕೆ ಪಡೆದು ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದ್ದು, ಗಾಯಾಳುವಿನ ಗುರುತು ಸೇರಿದಂತೆ ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ತಿಳಿದುಬರಬೇಕಿದೆ.
