ಕಾರವಾರ: ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಮುಂಬೈ–ತಿರುವನಂತಪುರಂ ನಡುವೆ ವಿಶೇಷ ರೈಲು ಸೇವೆ ಆರಂಭಿಸಿದೆ.
ಕೊಂಕಣ ರೈಲು ಮಾರ್ಗವಾಗಿ ಸಂಚರಿಸುವ ಈ ರೈಲು ಉತ್ತರ ಕನ್ನಡದ ಕಾರವಾರ, ಕುಮಟಾ ಹಾಗೂ ಮುರ್ಡೇಶ್ವರ ನಿಲ್ದಾಣಗಳಲ್ಲೂ ನಿಲುಗಡೆ ಹೊಂದಿರುವುದರಿಂದ ಜಿಲ್ಲೆಯ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
01463 ಸಂಖ್ಯೆಯ ಲೋಕಮಾನ್ಯ ತಿಲಕ್ ಟರ್ಮಿನಸ್–ತಿರುವನಂತಪುರಂ ನಾರ್ತ್ ವಿಶೇಷ ರೈಲು ಆ.23ರಂದು ಸಂಜೆ 4 ಗಂಟೆಗೆ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ನಿಂದ ಹೊರಡಲಿದೆ. ಕೊಂಕಣ ಕರಾವಳಿಯ ಪ್ರಮುಖ ನಿಲ್ದಾಣಗಳನ್ನು ದಾಟಿ ಕಾರವಾರ, ಕುಮಟಾ ಹಾಗೂ ಮುರ್ಡೇಶ್ವರ ಮೂಲಕ ಕೇರಳದತ್ತ ಸಾಗಲಿರುವ ರೈಲು ಮರುದಿನ ರಾತ್ರಿ 11.30ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ.
ಇದೇ ರೈಲು 01464 ಸಂಖ್ಯೆಯಲ್ಲಿ ತಿರುವನಂತಪುರಂ ನಾರ್ತ್ನಿಂದ ಮುಂಬೈಗೆ ಮರಳಲಿದೆ. ಆ.29ರಂದು ಮಧ್ಯಾಹ್ನ 2 ಗಂಟೆಗೆ ಹೊರಡುವ ವಿಶೇಷ ರೈಲು ಮೂರನೇ ದಿನ ಮಧ್ಯರಾತ್ರಿ 12.55ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್ ತಲುಪಲಿದೆ.
ಓಣಂ ಹಬ್ಬದ ಸಂದರ್ಭದಲ್ಲಿ ಮುಂಬೈ ಹಾಗೂ ಕೇರಳ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಈ ವಿಶೇಷ ಸೇವೆ ಹೆಚ್ಚುವರಿ ಆಯ್ಕೆಯಾಗಲಿದೆ. ವಿಶೇಷ ರೈಲಿನ ನಿಲುಗಡೆ ಹಾಗೂ ಪ್ರಯಾಣದ ವೇಳಾಪಟ್ಟಿಯನ್ನು ಪ್ರಯಾಣಿಕರು ರೈಲ್ವೆಯ ಅಧಿಕೃತ ಮಾಹಿತಿ ವ್ಯವಸ್ಥೆಯಲ್ಲಿ ಪರಿಶೀಲಿಸಿಕೊಂಡು ಪ್ರಯಾಣ ಯೋಜಿಸಬಹುದಾಗಿದೆ.
