ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

State-National

ಆರೋಗ್ಯಕರ ಸುದ್ದಿ! ವರದಿ ತಪ್ಪದೆ ಓದಿ

Pakka News Web • 23 ಆಗಸ್ಟ್ 2026,

ನೀವು ತಿನ್ನುವ ಪನ್ನೀರ್ ಅಸಲಿಯೇ ಅಥವಾ ನಕಲಿಯೇ? ಕೃತಕ ‘ಅನಲಾಗ್‌ ಪನ್ನೀರ್‌’ ಬ್ಯಾನ್ ಮಾಡಿದ ರಾಜ್ಯ ಸರ್ಕಾರ!

ಹಾಲಿನ ಕೊಬ್ಬಿನ ಬದಲು ಹಾನಿಕಾರಕ ಎಣ್ಣೆ, ರಾಸಾಯನಿಕ ಬಳಕೆ | ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ ಸರ್ಕಾರದ ಕಟ್ಟುನಿಟ್ಟಿನ ಕ್ರಮ | ನಿಯಮ ಮೀರಿ ಮಾರಾಟ ಮಾಡಿದರೆ ಹೋಟೆಲ್, ಡೇರಿಗಳ ವಿರುದ್ಧ ಕ್ರಿಮಿನಲ್ ಕೇಸ್

ರೆಸ್ಟೋರೆಂಟ್‌ಗೆ ಹೋದಾಗ ಪನ್ನೀರ್ ಬಟರ್ ಮಸಾಲಾ, ಪನ್ನೀರ್ ಟಿಕ್ಕಾ ಎಂದು ಬಾಯಿ ಚಪ್ಪರಿಸಿ ತಿನ್ನುವ ಪ್ರತಿಯೊಬ್ಬ ಆಹಾರ ಪ್ರಿಯರೂ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.

ಪನ್ನೀರ್ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಕೃತಕ ‘ಅನಲಾಗ್‌ ಪನ್ನೀರ್‌’ ತಯಾರಿಕೆ, ಸಂಗ್ರಹಣೆ ಹಾಗೂ ಮಾರಾಟವನ್ನು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಆಹಾರ ಗುಣಮಟ್ಟವನ್ನು ಕಾಪಾಡುವ ಮಹತ್ವದ ಉದ್ದೇಶದಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ತಂದಿದೆ.

ಸಾಮಾನ್ಯವಾಗಿ ಅಪ್ಪಟ ಪನ್ನೀರ್ ಅನ್ನು ಶುದ್ಧ ಹಾಲು ಹಾಗೂ ನೈಸರ್ಗಿಕ ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಇದು ದೇಹಕ್ಕೆ ಉತ್ತಮ ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಒದಗಿಸುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಕೆಲವರು ಅತಿಯಾದ ಲಾಭ ಗಳಿಸುವ ದುರಾಸೆಯಿಂದ ಹಾಲಿನ ಕೊಬ್ಬನ್ನು ಸಂಪೂರ್ಣವಾಗಿ ಕೈಬಿಟ್ಟು, ಅದರ ಬದಲಿಗೆ ಅಗ್ಗದ ಸಸ್ಯಜನ್ಯ ಎಣ್ಣೆ, ಸಂಸ್ಕರಿಸಿದ ಪಿಷ್ಟ (ಸ್ಟಾರ್ಚ್) ಹಾಗೂ ರಾಸಾಯನಿಕ ಪದಾರ್ಥಗಳನ್ನು ಬೆರೆಸಿ ಈ ಕೃತಕ ‘ಅನಲಾಗ್ ಪನ್ನೀರ್’ ತಯಾರಿಸುತ್ತಿದ್ದರು. ನೋಡಲು ಥೇಟ್ ಅಸಲಿ ಪನ್ನೀರ್‌ನಂತೆಯೇ ಕಾಣುವ ಈ ನಕಲಿ ಉತ್ಪನ್ನವನ್ನು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಅಸಲಿ ಪನ್ನೀರ್ ಹೆಸರಿನಲ್ಲೇ ಗ್ರಾಹಕರಿಗೆ ಬಡಿಸಿ ವಂಚಿಸುತ್ತಿರುವುದು ಇಲಾಖೆಯ ತಪಾಸಣೆ ವೇಳೆ ಸಾಬೀತಾಗಿದೆ.

ಆರೋಗ್ಯ ತಜ್ಞರ ಪ್ರಕಾರ, ಇಂತಹ ಕೃತಕ ಕೊಬ್ಬು, ರಾಸಾಯನಿಕ ಮತ್ತು ಪಿಷ್ಟ ಮಿಶ್ರಿತ ಉತ್ಪನ್ನಗಳನ್ನು ನಿರಂತರವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಬೊಜ್ಜು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಈ ಗಂಭೀರ ಆರೋಗ್ಯ ಸಮಸ್ಯೆಯನ್ನು ಮನಗಂಡು ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ಕೈಗೊಂಡಿದೆ.

ಇನ್ಮುಂದೆ ರಾಜ್ಯದ ಯಾವುದೇ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಬೇಕರಿಗಳು ಹಾಗೂ ಧಾಬಾಗಳಲ್ಲಿ ನಿಗದಿತ ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ತಯಾರಿಸಿದ ಅಪ್ಪಟ ಹಾಲಿನ ಪನ್ನೀರ್ ಅನ್ನು ಮಾತ್ರವೇ ಬಳಸಬೇಕು. ನಿಯಮ ಉಲ್ಲಂಘಿಸಿ ಕೃತಕ ಅಥವಾ ಅನಲಾಗ್ ಪನ್ನೀರ್ ಬಳಕೆ ಮಾಡುವುದು ಕಂಡುಬಂದರೆ ಅಂತಹ ಸಂಸ್ಥೆಗಳ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಜೊತೆಗೆ ಮಾರುಕಟ್ಟೆಯಲ್ಲಿನ ಕೃತಕ ಪನ್ನೀರ್ ಪೂರೈಕೆ ಜಾಲವನ್ನು ಬುಡಸಮೇತ ಕಿತ್ತೊಗೆಯಲು ಅಧಿಕಾರಿಗಳ ವಿಶೇಷ ತಂಡವು ರಾಜ್ಯಾದ್ಯಂತ ಡೇರಿಗಳು ಮತ್ತು ಆಹಾರ ಕೇಂದ್ರಗಳ ಮೇಲೆ ದಿಢೀರ್ ದಾಳಿ ನಡೆಸಿ, ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸುವ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250