ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಮತದಾರರಿಗೆ ನೋಟಿಸ್ : ಪರಿಶೀಲನೆಗೆ ಖುದ್ದು ಹಾಜರಿ ಕಡ್ಡಾಯ

Pakka News Web • 24 ಆಗಸ್ಟ್ 2026,

ಕಾರವಾರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ನೋಟಿಸ್ ಸ್ವೀಕರಿಸುವ ಮತದಾರರು ವಿಚಾರಣೆಗೆ ಖುದ್ದಾಗಿ ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮ್ಯಾಪಿಂಗ್ ಆಗದಿರುವುದು, ಮ್ಯಾಪಿಂಗ್‌ನಲ್ಲಿ ತಾರ್ಕಿಕ ವ್ಯತ್ಯಾಸ, ಸ್ಥಳಾಂತರ, ವಲಸೆ, ಮರಣ, ದ್ವಿಪ್ರತಿ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 65,330 ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ ಎಂದರು.

ನೋಟಿಸ್‌ಗಳನ್ನು ಸಂಬಂಧಪಟ್ಟ ಮತದಾರರಿಗೆ ಬಿಎಲ್‌ಒಗಳ ಮೂಲಕ ತಲುಪಿಸಲಾಗುವುದು. ನೋಟಿಸ್ ಪಡೆದವರು ಅದರಲ್ಲಿ ನಮೂದಿಸಿರುವ ದಿನಾಂಕ, ಸ್ಥಳ ಮತ್ತು ಸಮಯಕ್ಕೆ ಖುದ್ದಾಗಿ ಹಾಜರಾಗಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕು. ವಿಚಾರಣೆಗೆ ಹಾಜರಾಗದವರಿಗೆ ಮತ್ತೊಂದು ಅವಕಾಶ ನೀಡಲಾಗುತ್ತದೆಯಾದರೂ, ಗರಿಷ್ಠ ಎರಡು ವಿಚಾರಣಾ ದಿನಾಂಕಗಳಿಗೆ ಮಾತ್ರ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಜಿಲ್ಲೆಯ ಒಟ್ಟು 12,30,037 ಮತದಾರರ ಪೈಕಿ 11,23,022 ಮಂದಿಯ ಮ್ಯಾಪಿಂಗ್ ಪೂರ್ಣಗೊಂಡಿದೆ. ಸೋಮವಾರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, 6 ವಿಧಾನಸಭಾ ಕ್ಷೇತ್ರಗಳಲ್ಲಿ 5,62,004 ಪುರುಷರು, 5,61,014 ಮಹಿಳೆಯರು ಹಾಗೂ 4 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 11,23,022 ಮತದಾರರಿದ್ದಾರೆ. ಮತಗಟ್ಟೆಗಳ ಪುನರ್ವಿಂಗಡಣೆ ಬಳಿಕ 78 ಹೊಸ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 1,523 ಮತಗಟ್ಟೆಗಳಿವೆ.

ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಅಕ್ಟೋಬರ್ 1, 2026ಕ್ಕೆ 18 ವರ್ಷ ಪೂರ್ಣಗೊಳಿಸುವ ಅರ್ಹರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಬಹುದು. ಹೆಸರು ಸೇರ್ಪಡೆ, ತೆಗೆದುಹಾಕುವಿಕೆ ಹಾಗೂ ತಿದ್ದುಪಡಿಗೆ ಸಂಬಂಧಿಸಿದ ಅರ್ಜಿಗಳನ್ನು ಈ ಅವಧಿಯಲ್ಲಿ ಸಲ್ಲಿಸಬಹುದಾಗಿದೆ.

ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುವುದು. ಅಕ್ಟೋಬರ್ 22ರೊಳಗೆ ಅರ್ಜಿಗಳ ವಿಲೇವಾರಿ ಪೂರ್ಣಗೊಳಿಸಿ, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250