ಕಾರವಾರ: ಸ್ಥಳೀಯ ಯುವಕರ ತಾಂತ್ರಿಕ ಕೌಶಲ್ಯವನ್ನು ಹೆಚ್ಚಿಸಿ, ಉದ್ಯೋಗಾವಕಾಶಗಳಿಗೆ ಅಗತ್ಯವಾದ ಪ್ರಾಯೋಗಿಕ ತರಬೇತಿ ಒದಗಿಸುವ ಉದ್ದೇಶದಿಂದ ಕಾರವಾರ ನೌಕಾ ಡಾಕ್ಯಾರ್ಡ್ ಹಾಗೂ ಜಿಲ್ಲೆಯ ನಾಲ್ಕು ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ನಡುವೆ ಗುರುವಾರ ತಿಳಿವಳಿಕೆ ಒಪ್ಪಂದ (ಎಂಒಯು)ಕ್ಕೆ ಸಹಿ ಹಾಕಲಾಯಿತು.
ಕಾರವಾರದ ನೌಕಾ ಡಾಕ್ಯಾರ್ಡ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರವಾರದ ಶ್ರೀ ಸೋಮನಾಥ ಐಟಿಐ ಬಿಣಗಾ, ಸರ್ಕಾರಿ ಐಟಿಐ ಬಾಡ್, ಮಲ್ಲಿಕಾರ್ಜುನ ಐಟಿಐ ಸಿದ್ದರ ಹಾಗೂ ಸರ್ಕಾರಿ ಐಟಿಐ ಅಂಕೋಲಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಯಿತು.
ನೌಕಾ ಡಾಕ್ಯಾರ್ಡ್ನ ಅಡ್ಮಿರಲ್ ಸೂಪರಿಂಟೆಂಡೆಂಟ್ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ವಿ.ಎಸ್.ಎಂ. ಹಾಗೂ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೇಶ್ ಸಸಿ ಸೇರಿದಂತೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕರ್ನಾಟಕ ನೌಕಾ ಪ್ರದೇಶದ (ಕೆಎನ್ಎ) ನಾಗರಿಕ–ಸೇನಾ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದೊಂದಿಗೆ ಈ ಉಪಕ್ರಮ ಕೈಗೊಳ್ಳಲಾಗಿದೆ. ಒಪ್ಪಂದದಡಿ ಐಟಿಐ ವಿದ್ಯಾರ್ಥಿಗಳಿಗೆ ನೌಕಾ ಡಾಕ್ಯಾರ್ಡ್ನಲ್ಲಿರುವ ಅತ್ಯಾಧುನಿಕ ನಿರ್ವಹಣಾ ಹಾಗೂ ಸಹಾಯಕ ವ್ಯವಸ್ಥೆಗಳು, ಆಧುನಿಕ ತಂತ್ರಜ್ಞಾನಗಳು ಮತ್ತು ಕೈಗಾರಿಕಾ ಕಾರ್ಯವಿಧಾನಗಳ ಕುರಿತು ನೇರವಾಗಿ ತಿಳಿದುಕೊಳ್ಳುವ ಅವಕಾಶ ದೊರೆಯಲಿದೆ. ಉದ್ಯೋಗಕ್ಕೆ ಪೂರಕವಾದ ಪ್ರಾಯೋಗಿಕ ತರಬೇತಿ ಹಾಗೂ ಕಾರ್ಯಸ್ಥಳದಲ್ಲಿಯೇ ಕಲಿಕೆಯ ಅವಕಾಶಗಳನ್ನೂ ಒದಗಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರಿಯರ್ ಅಡ್ಮಿರಲ್ ರವ್ನೀಶ್ ಸೇಠ್, ಕೌಶಲ್ಯಯುತ ಮಾನವ ಸಂಪನ್ಮೂಲ ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು. ಎಂಒಯು ಮೂಲಕ ಲಭ್ಯವಾಗುವ ಉನ್ನತ ಮಟ್ಟದ ತರಬೇತಿ ಮತ್ತು ಕಲಿಕಾ ಅವಕಾಶಗಳನ್ನು ಐಟಿಐಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ತರಗತಿಯಲ್ಲಿ ಕಲಿಯುವ ಜ್ಞಾನಕ್ಕೂ ಕೈಗಾರಿಕಾ ಕ್ಷೇತ್ರದಲ್ಲಿ ಅಗತ್ಯವಿರುವ ಪ್ರಾಯೋಗಿಕ ಅನುಭವಕ್ಕೂ ಇರುವ ಅಂತರವನ್ನು ಇಂತಹ ಸಹಯೋಗಗಳು ಕಡಿಮೆ ಮಾಡಲಿವೆ. ನೌಕಾ ಡಾಕ್ಯಾರ್ಡ್ನಂತಹ ಅತ್ಯಾಧುನಿಕ ಕಾರ್ಯಸ್ಥಳದಲ್ಲಿ ಸ್ಥಳೀಯ ಯುವಕರಿಗೆ ಕಲಿಕೆಯ ಅವಕಾಶ ದೊರೆಯುವುದು ಅವರ ಕೌಶಲ್ಯಾಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ ಎಂದರು.
ಈ ಸಹಯೋಗದಿಂದ ಯುವಕರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ, ಉತ್ತರ ಕನ್ನಡದ ತಾಂತ್ರಿಕ ಮಾನವ ಸಂಪನ್ಮೂಲದ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ. ‘ಸ್ಕಿಲ್ ಇಂಡಿಯಾ’ ಅಭಿಯಾನ ಹಾಗೂ ನಾಗರಿಕ–ಸೇನಾ ಸಹಕಾರದ ಆಶಯಗಳಿಗೆ ಈ ಒಪ್ಪಂದ ಮತ್ತಷ್ಟು ಬಲ ನೀಡಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
